ಬ್ರಹ್ಮೋಸ್ ಕ್ಷಿಪಣಿ: ಎಂಟು ದಿನಗಳಲ್ಲಿ ನಾಲ್ಕನೇ ಬಾರಿ ಯಶಸ್ವಿ ಪ್ರಯೋಗ

Update: 2020-12-01 15:11 GMT

ಭುವನೇಶ್ವರ,ಡಿ.1: ಭಾರತೀಯ ಸಶಸ್ತ್ರ ಪಡೆಗಳು ಮಂಗಳವಾರ ಭಾರತೀಯ ನೌಕಾಪಡೆಯ ವಿನಾಶಕ ನೌಕೆ ‘ಐಎನ್‌ಎಸ್ ರಣವಿಜಯ ’ದಿಂದ ಧ್ವನಿವೇಗಾಧಿಕ ದಾಳಿ ಕ್ಷಿಪಣಿ ‘ಬ್ರಹ್ಮೋಸ್ ’ನ ಯಶಸ್ವಿ ಪರೀಕ್ಷಾರ್ಥ ಪ್ರಯೋಗವನ್ನು ನಡೆಸಿ ಹೊಸ ಇತಿಹಾಸವನ್ನು ಸೃಷ್ಟಿಸಿವೆ. ಇದೇ ಮೊದಲ ಬಾರಿಗೆ ಮೂರೂ ಸಶಸ್ತ್ರಪಡೆಗಳು ಭಾರತದ ಅತ್ಯಂತ ಶಕ್ತಿಶಾಲಿ ಮತ್ತು ಅತ್ಯಂತ ವೇಗದ ಕ್ಷಿಪಣಿ ಪರೀಕ್ಷೆಯನ್ನು ನಡೆಸಿದ್ದು,ಅದು ಗುರಿಯ ಮೇಲೆ ನಿಖರವಾಗಿ ದಾಳಿ ನಡೆಸಿದೆ. ಇದು ಕಳೆದ ಎಂಟು ದಿನಗಳಲ್ಲಿ ಬ್ರಹ್ಮೋಸ್‌ನ ನಾಲ್ಕನೇ ಪರೀಕ್ಷಾರ್ಥ ಪ್ರಯೋಗವಾಗಿದ್ದು,ಈ ವರ್ಷದಲ್ಲಿ ಏಳನೇ ಪ್ರಯೋಗವಾಗಿದೆ.

ಬೆಳಿಗ್ಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದಿಂದ ಕ್ಷಿಪಣಿಯನ್ನು ಉಡಾಯಿಸಲಾಗಿದ್ದು ಅದು ತನ್ನ ಗುರಿಯಾಗಿದ್ದ ಬಂಗಾಳ ಕೊಲ್ಲಿಯಲ್ಲಿ ಕಾರ್ ನಿಕೋಬಾರ್ ದ್ವೀಪದ ಬಳಿ ನೌಕಾಪಡೆಯಿಂದ ನಿವೃತ್ತಿಗೊಂಡಿರುವ ಹಡಗಿಗೆ ನಿಖರವಾಗಿ ಅಪ್ಪಳಿಸಿದೆ ಎಂದು ಹಿರಿಯ ರಕ್ಷಣಾ ಅಧಿಕಾರಿಗಳು ತಿಳಿಸಿದರು.

ಶಬ್ದದ ಮೂರು ಪಟ್ಟು ವೇಗದಿಂದ ಚಲಿಸುವ ಒಂಭತ್ತು ಮೀ.ಉದ್ದದ ಬ್ರಹ್ಮೋಸ್ ಕ್ಷಿಪಣಿಯು 300 ಕೆ.ಜಿವರೆಗೆ ತೂಕದ ಸಿಡಿತಲೆಗಳನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ. ಅದರ ದಾಳಿ ವ್ಯಾಪ್ತಿಯನ್ನು 290 ಕಿ.ಮೀ.ನಿಂದ 450 ಕಿ.ಮೀ.ಗೆ ಹೆಚ್ಚಿಸಲಾಗಿದ್ದು,10 ಮೀ.ಗೂ ಕಡಿಮೆ ಎತ್ತರದಿಂದಲೂ ತನ್ನ ಗುರಿಯ ಮೇಲೆ ಪರಿಣಾಮಕಾರಿಯಾಗಿ ದಾಳಿ ನಡೆಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News