ಭಯೋತ್ಪಾದಕರು ಬಳಸಿದ್ದ ಸುರಂಗದ ಪತ್ತೆಗಾಗಿ ಪಾಕ್ ಪ್ರದೇಶಕ್ಕೆ ನುಗ್ಗಿದ್ದ ಭಾರತೀಯ ಯೋಧರು
ಹೊಸದಿಲ್ಲಿ,ಡಿ.1: ಭಯೋತ್ಪಾದಕರು ಭಾರತದೊಳಗೆ ನುಸುಳಲು ಬಳಸಿದ್ದ ಸುರಂಗದ ಆರಂಭವನ್ನು ಪತ್ತೆ ಹಚ್ಚಲು ಇತ್ತೀಚಿಗೆ ನಡೆಸಲಾದ ಕಾರ್ಯಾಚರಣೆಯೊಂದರಲ್ಲಿ ಭಾರತೀಯ ಭದ್ರತಾ ಪಡೆಗಳು ಪಾಕಿಸ್ತಾನದ ಭೂಪ್ರದೇಶದಲ್ಲಿ ಸುಮಾರು 200 ಮೀ.ನಷ್ಟು ಒಳನುಗ್ಗಿದ್ದವು ಎಂದು ಬಿಎಸ್‌ಎಫ್ ಮಹಾನಿರ್ದೇಶಕ ರಾಕೇಶ್ ಅಸ್ಥಾನಾ ಅವರು ಮಂಗಳವಾರ ಇಲ್ಲಿ ತಿಳಿಸಿದರು.
ನ.19ರಂದು ನಗ್ರೋತಾದಲ್ಲಿ ಭಾರತೀಯ ಪಡೆಗಳ ಗುಂಡಿಗೆ ಬಲಿಯಾದ ಭಯೋತ್ಪಾದಕರು ಈ ಸುರಂಗವನ್ನು ಬಳಸಿದ್ದರು. ಬಿಎಸ್‌ಎಫ್ ಮತ್ತು ಜಮ್ಮು-ಕಾಶ್ಮೀರ ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ನ.22ರಂದು ಜಮ್ಮು-ಕಾಶ್ಮೀರದ ಸಾಂಬಾ ವಿಭಾಗದ ಅಂತರರಾಷ್ಟ್ರೀಯ ಗಡಿಗೆ ಸಮೀಪ 150 ಮೀ.ಉದ್ದದ ಈ ಭೂಗತ ಸುರಂಗವನ್ನು ಪತ್ತೆ ಹಚ್ಚಿದ್ದರು. ಹತರಾಗಿದ್ದ ಭಯೋತ್ಪಾದಕರಿಂದ ವಶಪಡಿಸಿಕೊಳ್ಳಲಾಗಿದ್ದ ಮೊಬೈಲ್ ಫೋನ್‌ಗಳು ಸುರಂಗವನ್ನು ಪತ್ತೆ ಹಚ್ಚಲು ಬಿಎಸ್‌ಎಫ್ ಯೋಧರಿಗೆ ನೆರವಾಗಿದ್ದವು ಎಂದು ಬಿಎಸ್‌ಎಫ್ ಸ್ಥಾಪನಾ ದಿನದ ಅಂಗವಾಗಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅಸ್ಥಾನಾ ತಿಳಿಸಿದರು.
ಸುರಂಗದ ನಿರ್ಗಮನ ದ್ವಾರವನ್ನು ದಪ್ಪ ಪೊದೆಗಳಿಂದ ಮುಚ್ಚಲಾಗಿತ್ತು ಮತ್ತು ಮಣ್ಣು ಹರಡಲಾಗಿತ್ತು. ಸುರಂಗದ ಬಾಯಿಯನ್ನು ಕರಾಚಿ ಎಂದು ಮುದ್ರಿಸಲಾಗಿದ್ದ ಮರಳಿನ ಚೀಲಗಳಿಂದ ಬಲಗೊಳಿಸಲಾಗಿತ್ತು. ಇದು ಹೊಸದಾಗಿ ನಿರ್ಮಿಸಲಾದ ಸುರಂಗವಾ ಗಿದ್ದು,ಭಯೋತ್ಪಾದಕರು ಮೊದಲ ಬಾರಿಗೆ ಬಳಸಿದಂತಿದೆ ಎಂದು ಬಿಎಸ್‌ಎಫ್ ಜಮ್ಮು ಮುಂಚೂಣಿಯ ಐಜಿ ಎನ್.ಎಸ್.ಜಾಮ್ವಾಲ್ ತಿಳಿಸಿದರು.