ರಾಜ್ಯದ ಆಡಳಿತ ರಾಜ್ಯದಿಂದಲೇ ನಡೆಯಲಿ

Update: 2020-12-01 17:51 GMT

ಮಾನ್ಯರೇ,

ಕರ್ನಾಟಕದ ಆಡಳಿತವನ್ನು ಕರ್ನಾಟಕದಿಂದಲೇ ನಡೆಸಬೇಕೆಂಬುದು ಎಲ್ಲರ ಆಸೆಯಾಗಿರುತ್ತದೆ. ಆದರೆ ನಮ್ಮ ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷಗಳು ಅಧಿಕಾರಕ್ಕೆ ಬಂದ ಎಲ್ಲ ಸಂದರ್ಭಗಳಲ್ಲಿ ಅಧಿಕಾರವನ್ನು ನಡೆಸುವವರು ಆಯಾ ಪಕ್ಷಗಳ ಹೈಕಮಾಂಡ್ ಆಗಿರುತ್ತದೆ. ಮಂತ್ರಿಮಂಡಲದ ರಚನೆಯ ಪರಮಾಧಿಕಾರ ಮುಖ್ಯಮಂತ್ರಿಗೆ ಎನ್ನುವುದು ಹಾಳೆಯ ಮೇಲೆ ಇದೆ. ಆದರೆ ನಿಜಕ್ಕೂ ಅಧಿಕಾರವಿರುವುದು ರಾಷ್ಟ್ರೀಯ ಪಕ್ಷದ ವರಿಷ್ಠರಿಗೆ ಎನ್ನುವುದು ಹಲವಾರು ನಿದರ್ಶನಗಳಿಂದ ಸಾಬೀತಾಗಿದೆ. ರಾಜ್ಯಸಭಾ ಸದಸ್ಯರು ರಾಜ್ಯದಿಂದ ಯಾರಾಗಬೇಕು, ವಿಧಾನಪರಿಷತ್‌ನ ಸದಸ್ಯರು ಯಾರಾಗಬೇಕು ಎಲ್ಲವೂ ನಿರ್ಧಾರವಾಗುವುದು ದಿಲ್ಲಿಯಿಂದಲೇ. ಮಂತ್ರಿಮಂಡಲದಲ್ಲಿ ಮಂತ್ರಿಗಳನ್ನು ಮಾಡುವ ಅಧಿಕಾರವೂ ಮುಖ್ಯಮಂತ್ರಿಗೆ ಇರುವುದಿಲ್ಲ. ಜೊತೆಗೆ ಖಾತೆಯನ್ನು ಹಂಚಿಕೆ ಮಾಡುವ ಅಧಿಕಾರವನ್ನು ಅವರು ಕಳೆದುಕೊಂಡಿರುತ್ತಾರೆ. ಮಂತ್ರಿಮಂಡಲದ ಹೆಸರಿನೊಂದಿಗೆ ಖಾತೆಯನ್ನು ಹಂಚುವವರು ದಿಲ್ಲಿಯ ದೊರೆಗಳಾಗಿರುತ್ತಾರೆ. 1983 ರಿಂದ 1988ರ ಅವಧಿಯಲ್ಲಿ ಮತ್ತು 1994ರಿಂದ 1999ರ ಅವಧಿಯಲ್ಲಿ ಮಾತ್ರವೇ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಪಕ್ಷಕ್ಕೆ ಹೈಕಮಾಂಡ್ ಎನ್ನುವುದು ಕಮಾಂಡಾಗಿರಲಿಲ್ಲ. ಎಲ್ಲಾ ಅಧಿಕಾರವೂ ರಾಜ್ಯದ ಮುಖ್ಯಮಂತ್ರಿ ಮತ್ತು ಪಕ್ಷದ ಮುಖಂಡರ ಬಳಿಯಲ್ಲಿಯೇ ಇತ್ತು. ಆದಾದ ನಂತರ ಇತ್ತೀಚಿನ ವರ್ಷಗಳಲ್ಲಿ ಮುಖ್ಯಮಂತ್ರಿಗಳು ಹೆಚ್ಚಿನ ಅಧಿಕಾರವನ್ನು ದಿಲ್ಲಿಯ ವರಿಷ್ಠರಿಗೆ ನೀಡಿರುತ್ತಾರೆ. ಅವರು ಆಡಿಸುವ ಕೀಲುಬೊಂಬೆಯಾಗಿ ಕೆಲಸ ಮಾಡಬೇಕಷ್ಟೆ.

ಮಂತ್ರಿಮಂಡಲ ರಚನೆಯ ವಿಚಾರದಲ್ಲಿ ಪದೇ ಪದೇ ಮುಖ್ಯಮಂತ್ರಿಗಳು ಇವರಿಗಿಂತ ವಯಸ್ಸಿನಲ್ಲಿ ಮತ್ತು ರಾಜಕೀಯದ ಅನುಭವದಲ್ಲಿ ಕಿರಿಯರ ಮುಂದೆ ಪಟ್ಟಿಯನ್ನು ತೆಗೆದುಕೊಂಡು ಹೋಗಿ ಅವರ ಭೇಟಿಗೆ ಅನುಮತಿಗಾಗಿ ಕಾಯುತ್ತಾ ಅನುಮತಿ ದೊರೆಯದಿದ್ದಾಗ ಬರಿಗೈಯಲ್ಲಿ ಬಂದು ಮತ್ತೆ ಅವರು ಕರೆದಾಗ ಹೋಗುತ್ತೇವೆ ಎನ್ನುವುದು ಒಂದು ರಾಜ್ಯದ ಮುಖ್ಯಮಂತ್ರಿಗಳ ಹಿರಿತನಕ್ಕೆ ಅಗೌರವ ಎಂದು ಅನ್ನಿಸುವುದಿಲ್ಲವೇ?. ಇನ್ನು ಮುಂದಾದರೂ ರಾಷ್ಟ್ರೀಯ ಪಕ್ಷಗಳು ಮಂತ್ರಮಂಡಲದ ರಚನೆ ಮತ್ತು ಸರಕಾರದಲ್ಲಿನ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರ ಆಯಾ ರಾಜ್ಯದ ಮುಂತ್ರಿಗಳಿಗೆ ಬಿಟ್ಟು ಸಂಘಟನೆ ಜವಾಬ್ದಾರಿಯ ಹಿನ್ನೆಲೆಯಲ್ಲಿ ಮಾತ್ರ ಮೂಗು ತೂರಿಸುವುದು ಒಳ್ಳೆಯದು. ಇಲ್ಲದಿದ್ದರೆ, ಕರ್ನಾಟಕದ ಆಡಳಿತ ಕರ್ನಾಟಕದಿಂದ ಎಂಬುದು ಕೇವಲ ತೋರಿಕೆಯ ಮಾತುಗಳಾಗುತ್ತದೆ. 

Similar News