ಮಾನಸಿಕ ಅಸ್ವಸ್ಥೆಯ ಮೇಲೆ ಅತ್ಯಾಚಾರ ಪ್ರಕರಣ: ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿದ ಸುಪ್ರೀಂಕೋರ್ಟ್

Update: 2020-12-05 14:07 GMT

ಹೊಸದಿಲ್ಲಿ, ಡಿ.5: ಮಾನಸಿಕ ಅಸ್ವಸ್ಥೆಯ ಮೇಲೆ ಅತ್ಯಾಚಾರ ಎಸಗಿರುವ ಆರೋಪಿಯ ಅಪರಾಧವನ್ನು ಸಾಬೀತುಪಡಿಸಿ ಹಿಮಾಚಲಪ್ರದೇಶ ಹೈಕೋರ್ಟ್ ನೀಡಿರುವ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದ್ದು, ಪ್ರಕರಣ ವಜಾಗೊಳಿಸಬೇಕೆಂದು ಆರೋಪಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದೆ.

ಅತ್ಯಾಚಾರಕ್ಕೆ ಒಳಗಾಗಿದ್ದ ಮಹಿಳೆ ಮಗುವಿಗೆ ಜನ್ಮ ನೀಡಿದ್ದು ಆರೋಪಿ ಈ ಮಗುವಿನ ತಂದೆ ಎಂಬುದು ಡಿಎನ್‌ಎ ಪರೀಕ್ಷೆಯ ವರದಿಯಿಂದ ಸಾಬೀತಾಗಿದೆ. ಮಾನಸಿಕ ಅಸ್ವಸ್ಥತೆಯಿಂದ ಬಳಲುವ ವ್ಯಕ್ತಿಗಳ ಬಗ್ಗೆ ವಿಶೇಷ ಕಾಳಜಿ ವಹಿಸುವ ಅಗತ್ಯವಿದೆ.  ಆದರೆ ಆರೋಪಿಯು ಆ ಮಹಿಳೆಯ ಅಸಹಾಯಕತೆ ಮತ್ತು ಮಾನಸಿಕ ಅಸ್ವಸ್ಥೆಯನ್ನು ದುರುಪಯೋಗಪಡಿಸಿಕೊಂಡು ಅತ್ಯಾಚಾರ ಎಸಗಿದ್ದಾನೆ. ಹೈಕೋರ್ಟ್ ನೀಡಿರುವ ತೀರ್ಪಿನಲ್ಲಿ ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸುವುದಿಲ್ಲ ಎಂದು ಸುಪ್ರೀಂಕೋರ್ಟ್ ನ್ಯಾಯಪೀಠ ಹೇಳಿದೆ.

2008ರಲ್ಲಿ ಈ ಪ್ರಕರಣ ನಡೆದಿದೆ. ಮಾನಸಿಕ ಅಸ್ವಸ್ಥಳಾದ ತಮ್ಮ ಪುತ್ರಿ 31 ವಾರಗಳ ಗರ್ಭಿಣಿಯಾಗಿರುವುದು ತಿಳಿದು ಬಂದ ಬಳಿಕ ಹೆತ್ತವರು ಪೊಲೀಸರಲ್ಲಿ ದೂರು ನೀಡಿದ್ದರು. ವಿಚಾರಣೆ ಸಂದರ್ಭ ಯುವತಿ ಅರೋಪಿಯ ಹೆಸರು ತಿಳಿಸಿದ್ದು, ಅತ್ಯಾಚಾರದ ಬಗ್ಗೆ ಬಾಯಿ ಬಿಡಬಾರದೆಂದು ಎಚ್ಚರಿಸಿದ್ದ ಎಂದು ಹೇಳಿದ್ದಾಳೆ. ಆದರೆ ವಿಳಂಬವಾಗಿ ದೂರು ನೀಡಿರುವುದನ್ನು ಉಲ್ಲೇಖಿಸಿ ವಿಚಾರಣಾ ನ್ಯಾಯಾಲಯ ಆರೋಪಿಯನ್ನು ದೋಷ ಮುಕ್ತಗೊಳಿಸಿತ್ತು. ಇದನ್ನು ಪ್ರಶ್ನಿಸಿ ಯುವತಿಯ ಹೆತ್ತವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಮಗುವಿನ ಡಿಎನ್‌ಎ ವರದಿಯಲ್ಲಿ ಆರೋಪಿಯೇ ಮಗುವಿನ ತಂದೆ ಎಂಬುದು ಸಾಬೀತಾಗಿರುವುದನ್ನು ಪರಿಗಣಿಸಿದ ಹೈಕೋರ್ಟ್, ಆರೋಪಿಗೆ ಶಿಕ್ಷೆ ಘೋಷಿಸಿತ್ತು. ಆದರೆ ಆರೋಪಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ. ಇದನ್ನು ತಿರಸ್ಕರಿಸಿರುವ ಸುಪ್ರೀಂಕೋರ್ಟ್, ಹೈಕೋರ್ಟ್‌ನ ಆದೇಶವನ್ನು ಎತ್ತಿಹಿಡಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News