ತಬ್ಲೀಗಿ ಸಮಾವೇಶದಲ್ಲಿ ಭಾಗವಹಿಸಿದ್ದ ವ್ಯಕ್ತಿಯ ವಿರುದ್ಧ ಕೊಲೆಯತ್ನ ಆರೋಪ!

Update: 2020-12-05 14:28 GMT

ಅಲಹಾಬಾದ್,ಡಿ.5: ತಬ್ಲೀಗಿ ಜಮಾಅತ್ ಕಳೆದ ಮಾರ್ಚ್‌ನಲ್ಲಿ ದಿಲ್ಲಿಯಲ್ಲಿ ಏರ್ಪಡಿಸಿದ್ದ ಧಾರ್ಮಿಕ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಉತ್ತರ ಪ್ರದೇಶದ ಮೌ ಪಟ್ಟಣದ ನಿವಾಸಿಯ ವಿರುದ್ಧ ಕೊಲೆಯತ್ನ ಆರೋಪವನ್ನು ಹೊರಿಸಿರುವುದು ಕಾನೂನಿನ ಅಧಿಕಾರದ ದುರುಪಯೋಗವನ್ನು ಬಿಂಬಿಸುತ್ತಿದೆ ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯವು ಕಿಡಿಕಾರಿದೆ.

 ಸಮಾವೇಶದಲ್ಲಿ ಪಾಲೊಳ್ಳುವ ಬಗ್ಗೆ ಸ್ಥಳೀಯ ಅಧಿಕಾರಿಗಳಿಗೆ ಉದ್ದೇಶಪೂರ್ವಕವಾಗಿ ಮಾಹಿತಿ ನೀಡದ ಮತ್ತು ದಿಲ್ಲಿಯಿಂದ ಮರಳಿದ ಬಳಿಕ ಸ್ವಯಂಪ್ರೇರಿತ ಕ್ವಾರಂಟೈನ್‌ಗೆ ಒಳಗಾಗಿದ್ದ ಆರೋಪಕ್ಕೆ ಗುರಿಯಾಗಿರುವ ಮುಹಮ್ಮದ್ ಸಾದ್ ವಿರುದ್ಧ ಐಪಿಸಿಯ ಕಲಂ 307 (ಕೊಲೆಗೆ ಯತ್ನ)ರಡಿ ಕಾನೂನು ಕಲಾಪಕ್ಕೆ ತಡೆಯಾಜ್ಞೆ ನೀಡಿದ ನ್ಯಾಯಾಲಯವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು.

ತನ್ನ ವಿರುದ್ಧ ಸಲ್ಲಿಸಲಾಗಿರುವ ಆರೋಪಪಟ್ಟಿಯನ್ನು ಪ್ರಶ್ನಿಸಿ ಅರ್ಜಿಯನ್ನು ಸಲ್ಲಿಸಿದ್ದ ಸಾದ್,ಕೊರೋನ ವೈರಸ್ ಹರಡುತ್ತಿರುವುದಕ್ಕಾಗಿ ಮೊದಲು ತನ್ನ ವಿರುದ್ಧ ಐಪಿಸಿಯ ಕಲಂ 269 ಮತ್ತು 270ರಡಿ ಆರೋಪಪಟ್ಟಿಯನ್ನು ಸಲ್ಲಿಸಲಾಗಿತ್ತು. ಆದರೆ ನಂತರ ಅದನ್ನು ಹಿಂದೆಗೆದುಕೊಂಡು ಕೊಲೆಯತ್ನ ಆರೋಪದಡಿ ಹೊಸ ಆರೋಪಪಟ್ಟಿಯನ್ನು ಸಲ್ಲಿಸಲಾಗಿದೆ ಎಂದು ನಿವೇದಿಸಿಕೊಂಡಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಅಜಯ್ ಭಾನೋಟ್ ಅವರು ಪ್ರಕರಣದಲ್ಲಿ ಉತ್ತರಗಳನ್ನು ಸಲ್ಲಿಸುವಂತೆ ರಾಜ್ಯ ಸರಕಾರ, ಮೌ ಪಟ್ಟಣದ ಎಸ್‌ಎಸ್‌ಪಿ ಮತ್ತು ಸಂಬಂಧಿತ ಪೊಲೀಸ್ ಅಧಿಕಾರಿಗೆ ನಿರ್ದೇಶನ ಹೊರಡಿಸಿದ್ದಾರೆ. ಯಾವ ಸಾಕ್ಷ್ಯಾಧಾರಗಳ ಆಧಾರದಲ್ಲಿ ಆರೋಪಿಯ ವಿರುದ್ಧ ಐಪಿಸಿಯ ಕಲಂ 307ನ್ನು ಹೇರಲಾಗಿದೆ ಎನ್ನುವುದನ್ನು ವಿವರಿಸಿ ವೈಯಕ್ತಿಕ ಅಫಿಡವಿಟ್ ಸಲ್ಲಿಸುವಂತೆ ಅವರು ಸಂಬಂಧಿತ ಪೊಲೀಸ್ ಅಧಿಕಾರಿಗೆ ಆದೇಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News