ರೈತರ ಪ್ರತಿಭಟನೆ ಬೆಂಬಲಿಸಿ ರಾಷ್ಟ್ರಪತಿ ಪದಕ ಮರಳಿಸಿದ ನಿವೃತ್ತ ಅಧಿಕಾರಿ ರಾಯ್ ಸಿಂಗ್

Update: 2020-12-06 13:40 GMT
ಫೋಟೊ ಕೃಪೆ: ANI

ಅಮೃತಸರ, ಡಿ.6: ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ವ್ಯಕ್ತಪಡಿಸಿರುವ ಗೃಹರಕ್ಷಕ ದಳದ ನಿವೃತ್ತ ಕಮಾಂಡೆಂಟ್ ರಾಯ್ ಸಿಂಗ್ ಧಲಿವಾಲ್ ರಾಷ್ಟ್ರಪತಿ ಪದಕವನ್ನು ಶನಿವಾರ ವಾಪಸು ನೀಡಿದ್ದಾರೆ.

‘ದೇಶಕ್ಕೆ ಉತ್ತಮ ಸೇವೆ ಸಲ್ಲಿಸಿದ್ದಕ್ಕಾಗಿ ನನಗೆ ಪದಕ ನೀಡಲಾಗಿತ್ತು. ಆದರೆ ನಾನೊಬ್ಬ ರೈತನ ಮಗ. ಇಂದು ರೈತರು ತಮ್ಮ ಕಠಿಣ ಪರಿಶ್ರಮಕ್ಕೆ ಪ್ರತಿಫಲ ಪಡೆಯುವ ಬದಲು, ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಲು ರಸ್ತೆ ಮೇಲೆ ಕುಳಿತುಕೊಳ್ಳುವಂತಾಗಿದೆ. ರೈತರನ್ನು ಈ ರೀತಿ ನಡೆಸಿಕೊಳ್ಳುವುದನ್ನು ನೋಡಿ ತುಂಬಾ ಬೇಸರವಾಗಿದೆ. ಆದ್ದರಿಂದ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿ ಪದಕವನ್ನು ಹಿಂದಿರುಗಿಸುತ್ತಿದ್ದೇನೆ’ ಎಂದು ಧಲಿವಾಲ್ ಹೇಳಿದ್ದಾರೆ.

ಈ ಕಾನೂನುಗಳು ಜಾರಿಯಾಗಲಿ ಎಂದು ರೈತರು ಆಗ್ರಹಿಸಿಲ್ಲ ಅಥವಾ ಅದನ್ನು ಅವರು ಬಯಸುವುದಿಲ್ಲ. ಸರಕಾರದಿಂದ ಅವರು ಏನನ್ನೂ ಕೇಳಿಲ್ಲ. ಅನ್ನದಾತರಾಗಿರುವ ರೈತರು ತಮ್ಮ ಸ್ವಂತ ಊರು ಮತ್ತು ದೇಶದಲ್ಲೇ ಜಲಫಿರಂಗಿ ಮತ್ತು ಅಶ್ರುವಾಯು ಹೊಡೆತಕ್ಕೆ ಗುರಿಯಾಗಬೇಕಾಗಿದೆ ಎಂದವರು ಹೇಳಿದರು.

ಕೇಂದ್ರ ಸರಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಪಂಜಾಬ್‌ನ ಹಲವು ಮಾಜಿ ಕ್ರೀಡಾಪಟುಗಳು ಹಾಗೂ ಅಧಿಕಾರಿಗಳು ತಮಗೆ ಸರಕಾರ ನೀಡಿರುವ ಪ್ರಶಸ್ತಿ ಮತ್ತು ಪದಕವನ್ನು ಹಿಂದಿರುಗಿಸಲು ನಿರ್ಧರಿಸಿದ್ದಾರೆ.

ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಮತ್ತು ಅಕಾಲಿದಳದ ಮುಖಂಡ ಪ್ರಕಾಶ್ ಸಿಂಗ್ ಬಾದಲ್ ಪದ್ಮವಿಭೂಷಣ ಪ್ರಶಸ್ತಿಯನ್ನು, ಅಕಾಲಿದಳ (ಡೆಮೊಕ್ರಾಟಿಕ್) ಮುಖ್ಯಸ್ಥ ಸುಖ್‌ದೇವ್ ಸಿಂಗ್ ಧಿಂಡ್ಸಾ ಪದ್ಮಭೂಷಣ ಪ್ರಶಸ್ತಿಯನ್ನು, ಡಾ ಜಸ್ವಿಂದರ್ ಸಿಂಗ್ ಸಾಹಿತ್ಯ ಅಕಾಡೆಮಿ ಪುರಸ್ಕಾರವನ್ನು ಹಿಂದಿರುಗಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News