ಪೊಲೀಸರ ವಿರುದ್ಧ ‘ಕುಟುಕು ಕಾರ್ಯಾಚರಣೆ’ ನಡೆಸಿದ ನಾಲ್ವರು ಪತ್ರಕರ್ತರ ವಿರುದ್ಧ ಎಫ್‌ಐಆರ್

Update: 2020-12-06 15:32 GMT

ಅಹ್ಮದಾಬಾದ್, ಡಿ. 6: ಛದ್ಮ ಕಾರ್ಯಾಚರಣೆ (ಸ್ಟಿಂಗ್ ಆಪರೇಶನ್) ನಡೆಸಲು ರಾಜ್ ಕೋಟ್‌ನಲ್ಲಿರುವ ಪೊಲೀಸ್ ಠಾಣೆ ಪ್ರವೇಶಿಸಿದ ಹಾಗೂ ತಮ್ಮ ಕರ್ತವ್ಯ ನಿರ್ವಹಿಸಲು ಪೊಲೀಸ್ ಸಿಬ್ಬಂದಿಗೆ ಅಡ್ಡಿ ಉಂಟು ಮಾಡಿದ ಆರೋಪದಲ್ಲಿ ಗುಜರಾತಿ ದಿನಪತ್ರಿಕೆಯ ನಾಲ್ವರು ಪತ್ರಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

 ಐವರು ರೋಗಿಗಳು ಸಾವನ್ನಪ್ಪಲು ಕಾರಣವಾದ ನವೆಂಬರ್ 27ರಂದು ರಾಜಕೋಟ್‌ನಲ್ಲಿರುವ ಕೊವಿಡ್ ಆಸ್ಪತ್ರೆಯಲ್ಲಿ ಸಂಭವಿಸಿದ ಬೆಂಕಿ ಅವಘಡಕ್ಕೆ ಸಂಬಂಧಿಸಿ ‘ಕುಟುಕು ಕಾರ್ಯಾಚರಣೆ’ ನಡೆಸಲು ಮೂವರು ವರದಿಗಾರರು ಹಾಗೂ ಛಾಯಾಗ್ರಾಹಕರನ್ನು ಒಳಗೊಂಡ ನಾಲ್ವರು ಪತ್ರಕರ್ತತರು ರಾಜ್ ಕೋಟ್ ತಾಲೂಕಿನ ಪೊಲೀಸ್ ಠಾಣೆಗೆ ಡಿಸೆಂಬರ್ 1ರಂದು ಪ್ರವೇಶಿಸಿದ್ದರು ಎಂದು ರಾಜ್ ಕೋಟ್ ತಾಲೂಕಿನ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

ಆಸ್ಪತ್ರೆ ಬೆಂಕಿ ಅವಘಡದಲ್ಲಿ ಬಂಧಿತರಾಗಿರುವ ಮೂವರು ಆರೋಪಿಗಳನ್ನು ಲಾಕ್‌ಅಪ್‌ನಲ್ಲಿ ಇರಿಸುವ ಬದಲು ಪೊಲೀಸ್ ಸಿಬ್ಬಂದಿ ಕೊಠಡಿಯಲ್ಲಿ ಇರಿಸಿ ವಿಐಪಿ ಆತಿಥ್ಯ ನೀಡಲಾಗಿತ್ತು ಎಂದು ಡಿಸೆಂಬರ್ 2ರಂದು ದಿನಪತ್ರಿಕೆಯಲ್ಲಿ ಭಾವಾಚಿತ್ರದೊಂದಿಗೆ ವರದಿ ಪ್ರಕಟವಾಗಿತ್ತು ಎಂದು ಅವರು ತಿಳಿಸಿದ್ದಾರೆ.

 ಈ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯ ಕೆಲವು ವೀಡಿಯೊಗಳನ್ನು ಪತ್ರಕರ್ತರು ದಾಖಲಿಸಿಕೊಂಡಿದ್ದರು ಹಾಗೂ ಸಾಮಾಜಿಕ ಜಾಲ ತಾಣದ ವಿವಿಧ ವೇದಿಕೆಗಳಲ್ಲಿ ಹಂಚಿಕೊಂಡಿದ್ದರು ಎಂದು ಅವರು ಹೇಳಿದ್ದಾರೆ.

ಅಗ್ನಿ ಅವಘಡದ ಮೂವರು ಆರೋಪಿಗಳನ್ನು ರಾಜ್ ಕೋಟ್ ತಾಲೂಕು ಪೊಲೀಸ್ ಠಾಣೆಗೆ ನವೆಂಬರ್ 30ರಂದು ತರಲಾಯಿತು ಹಾಗೂ ಪ್ರತ್ಯೇಕ ಕೊಠಡಿಯಲ್ಲಿ ಇರಿಸಿ ವಿಚಾರಣೆ ನಡೆಸಲಾಯಿತು. ಅವರಿಗೆ ಯಾವುದೇ ರೀತಿಯ ವಿಐಪಿ ಆತಿಥ್ಯ ನೀಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News