ನಿರಾಶೆಗೊಳಿಸುವ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತರು
ಇಥಿಯೋಪಿಯದ ಪ್ರಧಾನಿ ಅಬೀ ಅಹ್ಮದ್, ತಿಗ್ರೆ ಪ್ರಾಂತದ ಪ್ರತ್ಯೇಕತಾವಾದಿಗಳ ವಿರುದ್ಧ ಬೃಹತ್ ಪ್ರಮಾಣದ ಮಿಲಿಟರಿ ಕಾರ್ಯಾಚರಣೆ ನಡೆಸಿದರು. ಪರಿಣಾಮವಾಗಿ ಪ್ರಾಯಶಃ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡರು ಮತ್ತು ಸಾವಿರಾರು ಮಂದಿ ನಿರಾಶ್ರಿತರಾಗಿ ತಮ್ಮ ಊರುಗಳನ್ನು ತ್ಯಜಿಸಬೇಕಾಯಿತು.
ಆಗ ಜಗತ್ತಿನಲ್ಲಿ ಒಂದು ರೀತಿಯ ಅಸಮಾಧಾನ, ಜಿಗುಪ್ಸೆ ಕಾಣಿಸಿಕೊಂಡಿತು. ಏಕೆಂದರೆ ನೊಬೆಲ್ ಪ್ರಶಸ್ತಿ ಸಮಿತಿ 2019ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಅಹ್ಮದ್ ಅವರಿಗೆ ನೀಡಿತ್ತು. ಹಾಗೆ ಪ್ರಶಸ್ತಿ ನೀಡುವುದರಲ್ಲಿ ಸಮಿತಿ ತಪ್ಪು ಮಾಡಿತೇ? ಎಂಬ ಪ್ರಶ್ನೆ ಶಾಂತಿಪ್ರಿಯರನ್ನು ಕಾಡತೊಡಗಿತು. ಕಳೆದ ವರ್ಷದವರೆಗೆ ಅಹ್ಮದ್ ಅವರನ್ನು ಇಥಿಯೋಪಿಯದಲ್ಲಿ ಪ್ರಜಾಪ್ರಭುತ್ವವನ್ನು ಸ್ಥಾಪಿಸುವ ಮತ್ತು ಎರಿಟ್ರಿಯಾವನ್ನು ಮಿತ್ರ ರಾಷ್ಟ್ರವಾಗಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಭರವಸೆಯ ಒಂದು ಜ್ಯೋತಿಯೆಂದು ಹಾಡಿಹೊಗಳಲಾಗಿತ್ತು. ಇಂತಹ ಓರ್ವ ರಾಜಕೀಯ ನಾಯಕನಲ್ಲಿ ಅಷ್ಟೊಂದು ಭರವಸೆ ಇಡುವಾಗ ನೊಬೆಲ್ ಸಮಿತಿ ತನ್ನ ಮುಗ್ಧತೆಯನ್ನು ಪ್ರದರ್ಶಿಸಿತೇ? ಅದೇ ರೀತಿಯಾಗಿ ಕೊಲಂಬಿಯದ ಅಧ್ಯಕ್ಷ ಜುವಾನ್ ಮ್ಯಾನುವೆಲ್ ಸ್ಯಾಂಟೋಸ್, ಅವರು ಹೇಳಿದ ಆದರ್ಶಗಳಂತೆ ನಡೆದುಕೊಳ್ಳದಿದ್ದಾಗ ಕೂಡ ವಿಶ್ವದ ಶಾಂತಿಪ್ರಿಯರು ನೊಬೆಲ್ ಸಮಿತಿಯ ನಿರ್ಧಾರದ ಬಗ್ಗೆ ಅಸಮಾಧಾನಗೊಂಡಿದ್ದರು. ಕಾರಣ: ಕೊಲಂಬಿಯದ ಕ್ರಾಂತಿಕಾರಿ ಸಶಸ್ತ್ರ ಪಡೆಗಳೊಂದಿಗೆ ದಶಕಗಳ ಕಾಲ ನಡೆಸಿದ್ದ ಅಂತರ್ಯುದ್ಧವನ್ನು (ಸಿವಿಲ್ ವಾರ್) ಕೊನೆಗೊಳಿಸಿದ್ದಕ್ಕಾಗಿ 2016ರಲ್ಲಿ ಸ್ಯಾಂಟೋಸ್ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಲಾಗಿತ್ತು. ಆದರೆ ಅವರ ಅಧ್ಯಕ್ಷತೆಯ ಅವಧಿಯಲ್ಲಿ ಪ್ಯಾರಾಮಿಲಿಟರಿ ಪಡೆಗಳ ಹಿಂಸೆಯ ಅತಿರೇಕಗಳು ಹಾಗೂ ಬೃಹತ್ ಮಟ್ಟದ ಮಾನವ ಹಕ್ಕುಗಳ ಉಲ್ಲಂಘನೆಗಳು ಸರಕಾರದ ಅಂಗಗಳಿಂದಲೇ ಮುಂದುವರಿದವು.
ಅದೇ ರೀತಿಯಾಗಿ, 2009ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರಿಗೆ ನೀಡಿದಾಗ ಕೂಡ ಅದು ವಿವಾದಕ್ಕೊಳಗಾಯಿತು. ಪ್ರಶಸ್ತಿ ಸ್ವೀಕರಿಸಿದ ಸ್ವಲ್ಪವೇ ಸಮಯದ ಬಳಿಕ ಒಬಾಮಾ ಅವರು ಅಫ್ಘಾನಿಸ್ತಾನಕ್ಕೆ ಬೃಹತ್ ಸಂಖ್ಯೆಯಲ್ಲಿ ಅಮೆರಿಕನ್ ಸೈನಿಕರನ್ನು ಕಳುಹಿಸುವಂತೆ ಆಜ್ಞೆ ಹೊರಡಿಸಿದರು. ಇದು ಅಲ್ಲಿ 2011ರಲ್ಲಿ ತೀವ್ರಸ್ವರೂಪದ ಯುದ್ಧಕ್ಕೆ ಕಾರಣವಾಯಿತು. ಅಲ್ಲದೆ ಅವರು ಲಿಬಿಯಾದಲ್ಲಿ ಮಿಲಿಟರಿ ಹಸ್ತಕ್ಷೇಪವೊಂದನ್ನು ಬೆಂಬಲಿಸಿದರು. ಅಂತಿಮವಾಗಿ ಅಲ್ಲಿ ಗೊಂದಲ ಏರ್ಪಟ್ಟಾಗ ತನ್ನ ಬೆಂಬಲವನ್ನು ಹಿಂದೆಗೆದುಕೊಂಡರು. ನೊಬೆಲ್ ಶಾಂತಿ ಪ್ರಶಸ್ತಿ ಪಡೆದು ಟೀಕೆಗೆ, ಖಂಡನೆಗೆ ಒಳಗಾದ ಇನ್ನೊಬ್ಬರು ಮ್ಯಾನ್ಮಾರ್‌ನ ಆಂಗ್ ಸಾನ್ ಸೂ ಕಿ. ಮ್ಯಾನ್ಮಾರ್‌ನ ಮಿಲಿಟರಿ ಸರ್ವಾಧಿಕಾರದ ವಿರುದ್ಧ ಧೈರ್ಯತೋರಿ ಪ್ರಜಾಸತ್ತೆಗಾಗಿ ಹೋರಾಡಿದ್ದಕ್ಕಾಗಿ 1991ರಲ್ಲಿ ಅವರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಆದರೆ 2016ರಲ್ಲಿ ಅವರು ಸ್ಟೇಟ್ ಕೌನ್ಸೆಲರ್ ಎಂದು ಅಧಿಕಾರ ಚಲಾಯಿಸತೊಡಗಿದೊಡನೆ ಅವರು ಅಲ್ಲಿಯ ಸೇನೆಯೊಂದಿಗೆ ಅಧಿಕಾರ ಹಂಚಿಕೆ ಮಾಡಿಕೊಂಡದ್ದಕ್ಕಾಗಿ ವ್ಯಾಪಕವಾದ ಟೀಕೆಗೊಳಗಾದರು, ರೊಹಿಂಗ್ಯಾ ಮುಸ್ಲಿಮರ ನರಮೇಧವನ್ನು ಆಕೆ ಅಂತರ್‌ರಾಷ್ಟ್ರೀಯ ನ್ಯಾಯಾಲಯದಲ್ಲಿ ಸಮರ್ಥಿಸಿಕೊಂಡರು. ತಾನು ಒಂದೊಮ್ಮೆ ಯಾವ ದಮನಕಾರಿ ಮಿಲಿಟರಿಯನ್ನು ವಿರೋಧಿಸಿದ್ದರೋ, ಅದೇ ಮಿಲಿಟರಿ ಜತೆ ಕೈ ಜೋಡಿಸಿ ರೊಹಿಂಗ್ಯಾಗಳ ನರಮೇಧವನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡರು.
ಅಬೀ, ಸ್ಯಾಂಟೋಸ್ ಒಬಾಮಾ ಮತ್ತು ಸೂ ಕಿ ಅವರು ತಮ್ಮ ಶಾಂತಿಪ್ರಿಯ ಅಭಿಮಾನಿಗಳನ್ನು ನಿರಾಶೆಗೊಳಿಸಿದ್ದಾರೆಂಬುದರಲ್ಲಿ ಅನುಮಾನವೇ ಇಲ್ಲ. ಅವರೆಲ್ಲರಲ್ಲೂ ಇರುವ ಸಾಮಾನ್ಯ ಅಂಶವೆಂದರೆ ಅವರೆಲ್ಲರೂ ಅವರವರ ದೇಶಗಳ ರಾಜಕೀಯ ನಾಯಕರು ಮತ್ತು ಸರಕಾರದ ಅಧಿಕಾರ ಹೊಂದಿದವರು.
ಅಬೀಯವರು ತಿಗ್ರೆಯಲ್ಲಿ ನಡೆದ ಯುದ್ಧವನ್ನು ‘‘ಕಾನೂನು ವ್ಯವಸ್ಥೆಯನ್ನು ಉಳಿಸಿಕೊಳ್ಳುವ ಇಥಿಯೋಪಿಯನ್ ಸರಕಾರದ ಜವಾಬ್ದಾರಿ’’ಯ ಒಂದು ಭಾಗವೆಂದು ಸಮರ್ಥಿಸಿಕೊಂಡಿದ್ದಾರೆ.
ಸೂ ಕಿ ಅವರು ಮ್ಯಾನ್ಮಾರ್‌ನಲ್ಲಿ ಪ್ರಜಾಪ್ರಭುತ್ವೀಕರಣ ಪ್ರಕ್ರಿಯೆ ಸಂಪೂರ್ಣಗೊಳ್ಳಬೇಕಾದರೆ ತಾನು ಅಲ್ಲಿಯ ಮಿಲಿಟರಿಗೆ ಸಹಕಾರ ನೀಡದೆ ಅನ್ಯ ಮಾರ್ಗವಿಲ್ಲ ಎನ್ನುತ್ತಾರೆ. ಹಾಗೆಯೇ ಒಬಾಮಾ ಅವರು ತಾನು ತೆಗೆದುಕೊಂಡ ಮಿಲಿಟರಿ ಕಾರ್ಯಾಚರಣೆಯ ಕ್ರಮಗಳನ್ನು ತಾರ್ಕಿಕವಾಗಿ ಸಮರ್ಥಿಸಿಕೊಂಡರು. ‘‘ನನ್ನ ರಾಷ್ಟ್ರವನ್ನು ರಕ್ಷಿಸುವ ಹಾಗೂ ಕಾಪಾಡುವ ಪ್ರತಿಜ್ಞೆ ಕೈಗೊಂಡ ಒಂದು ರಾಷ್ಟ್ರದ ಮುಖ್ಯಸ್ಥನಾಗಿ ಒಮ್ಮೆಮ್ಮೆ ಬಲಪ್ರಯೋಗ ಅವಶ್ಯಕ ಎಂಬುದು ಅವರ ನಿಲುವು ಆಗಿತ್ತು. ಸರಕಾರಿ ಯಂತ್ರಗಳನ್ನು ನಡೆಸುವ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತರು ಸಂತರ ಹಾಗೆ ನಡೆದುಕೊಳ್ಳಬೇಕೆಂದು ನಿರೀಕ್ಷಿಸುವುದು ಅವಾಸ್ತವಿಕ. ಅದೇನಿದ್ದರೂ ಅಧಿಕಾರದಲ್ಲಿರುವ ಪ್ರಧಾನಿಗಳಿಗೆ ಅಥವಾ ರಾಷ್ಟ್ರದ ಅಧ್ಯಕ್ಷರಿಗೆ ನೊಬೆಲ್ ಪ್ರಶಸ್ತಿ ನೀಡುವುದು ಸಹಜವಾಗಿಯೇ ಅಪಾಯಕಾರಿ ಮತ್ತು ಈ ನೊಬೆಲ್ ವಿಜೇತರನ್ನು ಓರ್ವ ಮದರ್ ತೆರೇಸಾ ಅಥವಾ ಮಲಾಲಾ ಯೂಸಫ್ ರೆಝಾ ರವರಿಗೆ ಸಮಾನವಾಗಿ ಪರಿಗಣಿಸುವುದು ಸರಿಯಲ್ಲ. ನೊಬೆಲ್ ಸಮಿತಿ ಅಧಿಕಾರಸ್ಥ ರಾಜಕಾರಣಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡುವುದನ್ನು ಭವಿಷ್ಯದಲ್ಲಿ ಸಂಪೂರ್ಣವಾಗಿ ಕೈಬಿಡದಿದ್ದಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತರಿಂದ ಶಾಂತಿ ಪ್ರಿಯರಿಗೆ ನಿರಾಶೆಯಾಗುವುದು ತಪ್ಪುವುದಿಲ್ಲ. (ಲೇಖಕರು ಜಿಂದಾಲ್ ಸ್ಕೂಲ್ ಆಫ್ ಇಂಟರ್‌ನ್ಯಾಶನಲ್ ಅಫೇರ್ಸ್‌ನಲ್ಲಿ ಪ್ರೊಫೆಸರ್ ಹಾಗೂ ಡೀನ್ ಆಗಿದ್ದಾರೆ)
(ಕೃಪೆ: ದಿ ಹಿಂದೂ)