×
Ad

ಟ್ರಾಯ್ ಮಾಜಿ ಅಧ್ಯಕ್ಷರ ಖಾತೆಗೆ ಹೋದ ಪಿಎಂ ಕಿಸಾನ್ ಯೋಜನೆಯ ಹಣ!

Update: 2020-12-14 14:43 IST
ರಾಮ್ ಸೇವಕ್ ಶರ್ಮ

ಹೊಸದಿಲ್ಲಿ,ಡಿ.14:  ಭಾರತದ ಟೆಲಿಕಾಂ ನಿಯಂತ್ರಣ ಪ್ರಾಧಿಕಾರದ (ಟ್ರಾಯ್) ಮಾಜಿ ಅಧ್ಯಕ್ಷ ಹಾಗೂ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ)ಮಾಜಿ ಮಹಾನಿರ್ದೇಶಕ ರಾಮ್ ಸೇವಕ್ ಶರ್ಮ ಅವರ ಖಾತೆಗೆ ಪಿಎಂ ಕಿಸಾನ್ ಯೋಜನೆಯ ಹಣ ಜಮೆಯಾಗಿದ್ದು ಅಚ್ಚರಿಗೆ ಕಾರಣವಾಗಿದೆ.  ಅವರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾತೆಯಲ್ಲಿ ಈ ವರ್ಷದ ಮಾರ್ಚ್ ಮತ್ತು ಆಗಸ್ಟ್ ತಿಂಗಳುಗಳಲ್ಲಿ ಪಿಎಂ ಕಿಸಾನ್ ಯೋಜನೆಯಡಿ ರೈತರಿಗೆ ದೊರಕಬೇಕಾದ ಸಹಾಯಧನದ ತಲಾ 2,000 ರೂ. ಮೊತ್ತದ ಮೂರು ಕಂತುಗಳು ಜಮೆಯಾಗಿದ್ದು, ಅವರು ಈ ಯೋಜನೆಯ ಫಲಾನುಭವಿಯಾಗಿ ನೋಂದಣಿ ಮಾಡದಿದ್ದರೂ ಕೂಡಾ ಖಾತೆಗೆ ಹಣ ಜಮೆಯಾಗಿದೆ.

ಈ ಕುರಿತು www.thequint.com ಸುದ್ದಿ ಸಂಸ್ಥೆಯು ತನಿಖಾ ವರದಿಯನ್ನು ಪ್ರಕಟಿಸಿತ್ತು. ಪಿಎಂ ಕಿಸಾನ್ ಯೋಜನೆಯ ಅಧಿಕೃತ ದಾಖಲೆಗಳಲ್ಲಿ ಶರ್ಮ ಅವರ ಹೆಸರಿನ ಖಾತೆಯನ್ನು ಜನವರಿ 8, 2020ರಲ್ಲಿ ಸೃಷ್ಟಿಸಲಾಗಿತ್ತು ಹಾಗೂ ಅದು ಒಂಬತ್ತು ತಿಂಗಳಿಗೂ ಹೆಚ್ಚು ಕಾಲ, ಅಂದರೆ ಕನಿಷ್ಠ ಸೆಪ್ಟೆಂಬರ್ 24ರ ತನಕ ಸಕ್ರಿಯವಾಗಿತ್ತು.

ಆಧಾರ್ ಸಂಖ್ಯೆಯನ್ನು ಬಳಸಿ ವಂಚಕರು ನಟ ರಿತೇಶ್ ದೇಶ್ ಮುಖ್, ಹನುಮಾನ್, ಮಾಜಿ ಐಎಸ್’ಐ ಬೇಹುಗಾರ ಮೆಹಬೂಬ್ ಅಖ್ತರ್ ಇನ್ನಿತರರ ಹೆಸರಿನಲ್ಲಿ ಬ್ಯಾಂಕ್ ಖಾತೆ ಸೃಷ್ಟಿಸಿ ಯೋಜನೆಯ ಹಣವನ್ನು ಲಪಟಾಯಿಸಿದ ಕೆಲವೊಂದು  ದೃಷ್ಟಾಂತಗಳನ್ನು www.thequint.com ತನ್ನ ಇತ್ತೀಚಿಗಿನ ವರದಿಯಲ್ಲಿ ಬಹಿರಂಗಗೊಳಿಸಿತ್ತು. ಆದರೆ ಶರ್ಮ ಪ್ರಕರಣದಲ್ಲಿ ಅವರದ್ದೇ ಬ್ಯಾಂಕ್ ಖಾತೆ ಸಂಖ್ಯೆ ಬಳಸಿ ಅವರಿಗೆ ಅರಿವಿಲ್ಲದೆಯೇ ಅವರ ಹೆಸರನ್ನು ಯೋಜನೆಗೆ ನೋಂದಣಿ ಮಾಡಲಾಗಿತ್ತು.

ಫಲಾನುಭವಿಗಳನ್ನು ಗುರುತಿಸಿ ಸೇರ್ಪಡೆಗೊಳಿಸುವ ಜವಾಬ್ದಾರಿ ಸರಕಾರಕ್ಕಿರುವುದರಿಂದ ತಮ್ಮ ಹೆಸರಿನಲ್ಲಿ ಯೋಜನೆಗೆ ನೋಂದಣಿ ಮಾಡಿದ್ದು ಸರಕಾರದ ತಪ್ಪು ಎಂದು ಶರ್ಮ ಹೇಳಿದ್ದಾರೆ.

ಕಿಸಾನ್ ಯೋಜನೆ ಹಣ ಜಮೆಯಾದ ಬ್ಯಾಂಕ್ ಖಾತೆ ಹಿಂದೂ ಅವಿಭಜಿತ ಕುಟುಂಬ ಖಾತೆಯಾಗಿತ್ತು ಹಾಗೂ ಅದನ್ನು ಆಗಸ್ಟ್ 2019ರಲ್ಲಿ ತೆರೆಯಲಾಗಿತ್ತು. ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯಲ್ಲಿ ತಮಗೆ ಕೃಷಿ ಭೂಮಿಯಿದೆ ಹಾಗೂ ತಾವು ಸಾವಯವ ಉತ್ಪನ್ನಗಳನ್ನು ಬೆಳೆಸಿ ಮಾರಾಟ ಮಾಡುವ ನೋಂದಣಿ ಹೊಂದಿದ ರೈತ ಎಂದು ಶರ್ಮ ಹೇಳಿದ್ದಾರೆ. ಮೇಲೆ ತಿಳಿಸಿದ ಬ್ಯಾಂಕ್ ಖಾತೆಯಲ್ಲಿ ಕೃಷಿ ಉತ್ಪನ್ನಗಳ ಮಾರಾಟದಿಂದ ಹಣ ಜಮೆ ಮಾಡಲು ಹಾಗೂ ಇತರ ಖರ್ಚುಗಳಿಗೆ ಬಳಸಲಾಗುತ್ತದೆ ಹಾಗೂ ತಾವು ಕೃಷಿಯನ್ನು ತಮ್ಮ ಕಿರಿಯ ಸೋದರನ ಜತೆಗೂಡಿ ನಡೆಸುತ್ತಿರುವುದಾಗಿ ಅವರು ಹೇಳಿದ್ದಾರೆ.

ತಮ್ಮ ಖಾತೆಗೆ ತಮಗೆ ಅರಿವಿಲ್ಲದಂತೆಯೇ ಕಿಸಾನ್ ಯೋಜನೆಯ ಹಣ ಬಂದಿರುವ ಬಗ್ಗೆ ತಾವು ಸೆಪ್ಟೆಂಬರ್ 24ರಂದೇ ಎಸ್‍ಬಿಐನ ನೊಯ್ಡಾ ಶಾಖೆಯ ಮುಖ್ಯ ಪ್ರಬಂಧಕರಿಗೆ ಪತ್ರ ಬರೆದಿದ್ದರೂ ಇನ್ನೂ ಉತ್ತರ ದೊರಕಿಲ್ಲ ಎಂದು ಅವರು ತಿಳಿಸಿದ್ದಾರೆ.

ಸದ್ಯ ಅವರ ಕಿಸಾನ್ ಯೋಜನಾ ಖಾತೆ ನಿಷ್ಕ್ರಿಯವಾಗಿದ್ದರೂ ಸಣ್ಣ ಮತ್ತು ಮಧ್ಯಮ ರೈತರಿಗೆ ಸಿಗಬೇಕಾದ ಹಣ ಅನರ್ಹ ವ್ಯಕ್ತಿಗೆ, ಅರ್ಜಿ ಸಲ್ಲಿಸದೇ ಇರುವ ವ್ಯಕ್ತಿಯ ಖಾತೆಗೆ ಜಮೆಯಾಗಿದ್ದಾದರೂ ಹೇಗೆ ಎಂಬ ಪ್ರಶ್ನೆ ಉಳಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News