ಪೊಲೀಸರ ಸ್ಥೈರ್ಯ ಹೆಚ್ಚಿಸಬೇಕಾದ ಸರಕಾರ
ಸಿಆರ್‌ಪಿಎಫ್‌ನ ನಿವೃತ್ತ ಪೊಲೀಸ್ ಮಾಜಿ ನಿರ್ದೇಶಕ ಮೇ ತಿಂಗಳ ಆದಿಯಲ್ಲಿ 32ರ ಹರೆಯದ ಕಾನ್‌ಸ್ಟೇಬಲ್ ಅಮಿತ್‌ಕುಮಾರ್ ದಿಲ್ಲಿ ಪೊಲೀಸ್ ಪಡೆಯಲ್ಲಿ ಕೋವಿಡ್-19ಕ್ಕೆ ಮೊದಲ ಬಲಿಯಾದರು. ಹಲವು ಆಸ್ಪತ್ರೆಗಳು ಅವರನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ ಬಳಿಕ ಅವರು ಮೃತಪಟ್ಟಿದ್ದರು (ನವೆಂಬರ್ 14ರವರೆಗೆ). ದಿಲ್ಲಿ ಪೊಲೀಸರಲ್ಲಿ ಕೊರೋನ ಪಾಸಿಟಿವ್ ಆದ 6,405 ಪೊಲೀಸ್ ಸಿಬ್ಬಂದಿಯಲ್ಲಿ 23 ಮಂದಿ ಮೃತಪಟ್ಟರು. ಎಪ್ರಿಲ್‌ನಲ್ಲಿ ಕೇಂದ್ರೀಯ ಮೀಸಲು ಪಡೆಯ ಇಕ್ರಂ ಹುಸೈನ್ ಕೋವಿಡ್-19 ಪಾಸಿಟಿವ್ ಎಂದು ದೃಢಪಟ್ಟ ಬಳಿಕ ನವದಿಲ್ಲಿಯಲ್ಲಿ ನಿಧನರಾದರು. ಆ ಬಳಿಕ ದಿಲ್ಲಿ ಪೊಲೀಸರಲ್ಲಿ 30ಕ್ಕೂ ಹೆಚ್ಚು ಮಂದಿಯನ್ನು ಕ್ವಾರಂಟೈನ್‌ಗೊಳಿಸಲಾಯಿತು. ಎಪ್ರಿಲ್ 12ರಂದು ಪಂಜಾಬ್‌ನ ಪಟಿಯಾಲದಲ್ಲಿ ಲಾಕ್‌ಡೌನ್ ಕಾರ್ಯಾಚರಣೆಯ ವೇಳೆ ಕರ್ಫ್ಯೂ ಪಾಸ್‌ಗಳನ್ನು ಕೇಳಿದ್ದಕ್ಕಾಗಿ ನಿಹಾಂಗ್ ಸಿಖ್ಖರ ಗುಂಪೊಂದು ಅಸಿಸ್ಟೆಂಟ್ ಸಬ್ ಇನ್‌ಸ್ಪೆಕ್ಟರ್ ಹರ್ಜಿತ್‌ಸಿಂಗ್‌ರವರ ಮೇಲೆ ದಾಳಿ ನಡೆಸಿತ್ತು. ಗುಂಪಿನಲ್ಲಿ ಇದ್ದವನೊಬ್ಬ ಕಠಾರಿಯಿಂದ ಸಿಂಗ್‌ರವರ ಕೈ ಕತ್ತರಿಸಿದ. ಅದೃಷ್ಟವಶಾತ್ ಸೂಕ್ತ ಚಿಕಿತ್ಸೆ ದೊರಕಿದ್ದರಿಂದ ಅವರ ಕೈಯನ್ನು ಮರುಜೋಡಿಸಲು ಸಾಧ್ಯವಾಯಿತು.
ಆರೋಗ್ಯ ಕಾರ್ಯಕರ್ತರಲ್ಲದೆ, ಪೊಲೀಸ್ ಸಿಬ್ಬಂದಿ ಕೋವಿಡ್-19ರ ಪರಿಣಾಮವಾಗಿ ಬಹಳ ಸಂಕಷ್ಟಕ್ಕೊಳಗಾದರು. ಅವರ ಕರ್ತವ್ಯದ ಭಾಗವಾಗಿ ಅವರು ಸಾರ್ವಜನಿಕರ ಸನಿಹಕ್ಕೆ ಹೋಗಲೇಬೇಕಾಗುತ್ತದೆ. ಪರಿಣಾಮವಾಗಿ ಅವರು ಕೊರೋನ ವೈರಸ್‌ಗೆ ತುತ್ತಾಗುವ ಸಾಧ್ಯತೆ ಸದಾ ಇದ್ದೇ ಇರುತ್ತದೆ.
ಇಂಡಿಯನ್ ಪೊಲೀಸ್ ಫೌಂಡೇಶನ್ ಪ್ರಕಾರ, ಅಕ್ಟೋಬರ್ ಅಂತ್ಯದ ವೇಳೆಗೆ ಕೊರೋನ ಪಾಸಿಟಿವ್ ಎಂದು ದೃಢಪಟ್ಟ 1.5 ಲಕ್ಷ ಪೊಲೀಸ್ ಹಾಗೂ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳ ಸಿಬ್ಬಂದಿ ಪೈಕಿ 900ಕ್ಕೂ ಹೆಚ್ಚು ಜನರು ತಮ್ಮ ಪ್ರಾಣ ಕಳೆದುಕೊಂಡರು.
ಕರ್ನಾಟಕದಲ್ಲಿ, ನವೆಂಬರ್ 2ರವರೆಗಿನ ದತ್ತಾಂಶಗಳ ಪ್ರಕಾರ 9,348 ಮಂದಿ ಪೊಲೀಸರು ಕೊರೋನ ಸೋಂಕಿಗೆ ಗುರಿ ಯಾಗಿದ್ದರು ಮತ್ತು ಅವರಲ್ಲಿ 31 ಮಂದಿ ಮೃತ ಪಟ್ಟರು.
ಅಸ್ಸಾಮಿನಲ್ಲಿ ಅಕ್ಟೋಬರ್ ಮೊದಲ ವಾರದವರೆಗೆ 4,679 ಮಂದಿ ಕೊರೋನ ಸೋಂಕಿಗೆ ಒಳಗಾಗಿ, ಅವರಲ್ಲಿ 23 ಮಂದಿ ಮೃತಪಟ್ಟಿದ್ದರು. ಅಕ್ಟೋಬರ್‌ವರೆಗೆ ಆಂಧ್ರಪ್ರದೇಶ ಪೊಲೀಸರಲ್ಲಿ 13,000 ಕೊರೋನ ಸೋಂಕು ಪ್ರಕರಣಗಳು ದಾಖಲಾಗಿದ್ದು 100ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ನವೆಂಬರ್ 6ರವರೆಗೆ ಉತ್ತರಪ್ರದೇಶ ಪೊಲೀಸ್ ಪಡೆಯಲ್ಲಿ 567 ಮಂದಿ ಕೊರೋನ ಸೋಂಕಿಗೊಳಗಾಗಿ ಅವರಲ್ಲಿ ಏಳು ಮಂದಿ ನಿಧನರಾದರು. ಭಾರೀ ಪ್ರವಾಸಿಗರನ್ನು ನಿಭಾಯಿಸಬೇಕಾಗಿ ಬಂದ ಗೋವಾ ಪೊಲೀಸ್ ಪಡೆಯಲ್ಲಿ 900 ಮಂದಿ ಸೋಂಕಿಗೊಳಗಾದರು. ಅವರಲ್ಲಿ ಪೊಲೀಸ್ ಮಹಾ ನಿರ್ದೇಶಕ ಮುಖೇಶ್‌ಕುಮಾರ್ ಮೀನಾ ಕೂಡ ಸೇರಿದ್ದರು.
ಹಲವು ಮಂದಿ ಪೊಲೀಸರು ಜನರ ಗುಂಪುಗಳನ್ನು ನಿಭಾಯಿಸಬೇಕಾದಾಗ ಸೋಂಕಿಗೊಳಗಾಗುತ್ತಾರೆ. ಹೀಗೆ ತಮ್ಮ ಸಹೋದ್ಯೋಗಿಗಳು ಸೋಂಕಿಗೊಳಗಾದಾಗ ಅಥವಾ ಕ್ವಾರಂಟೈನ್‌ಗೊಳಪಟ್ಟಾಗ, ಕರ್ತವ್ಯ ನಿರ್ವಹಿಸಬೇಕಾದ ಪೊಲೀಸರ ಸಂಖ್ಯೆ ಕಡಿಮೆಯಾಗಿ ಅವರ ಮೇಲಿನ ಕೆಲಸದ ಒತ್ತಡ ವಿಪರೀತ ಹೆಚ್ಚಾಗುತ್ತದೆ. ಅಲ್ಲದೆ, ತಮ್ಮಿಂದ ತಮ್ಮ ಕುಟುಂಬದ ಸದಸ್ಯರಿಗೆ ಸೋಂಕು ಹರಡಬಾರದೆಂಬ ಕಾರಣಕ್ಕಾಗಿ ಹಲವಾರು ಪೊಲೀಸರು ತಮ್ಮ ಮನೆಗಳಿಗೆ ಮರಳುವುದಿಲ್ಲ ಮರಳಿದರೂ, ಕುಟುಂಬದವರಿಂದ ಅಂತರ ಕಾಪಾಡಿಕೊಳ್ಳಬೇಕಾಗುತ್ತದೆ. ಕೋವಿಡ್-19ದಿಂದಾಗಿ ತಮ್ಮ ಪ್ರಾಣ ಕಳೆದುಕೊಳ್ಳುವ ಪೊಲೀಸರ ಕುಟುಂಬಗಳಿಗೆ ಸರಕಾರ ಪರಿಹಾರ ನೀಡುತ್ತದೆ. ಹೀಗೆ ಪ್ರಾಣ ಕಳೆದುಕೊಂಡ ಮಹಾರಾಷ್ಟ್ರದ 50 ಮಂದಿ ಪೊಲೀಸರಿಗೆ ಮಹಾರಾಷ್ಟ್ರ ಸರಕಾರ 50 ಲಕ್ಷ ರೂ ಪರಿಹಾರ ನೀಡಿತು. ಪೊಲೀಸ್ ಕಲ್ಯಾಣ ನಿಧಿಯಿಂದ ಹತ್ತು ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತದೆ. ದಿಲ್ಲಿ ಸರಕಾರ ಅಮಿತ್ ಕುಮಾರ್ ಕುಟುಂಬಕ್ಕೆ ಒಂದು ಕೋಟಿ ರೂಪಾಯಿ ಪರಿಹಾರ ನೀಡಿತು. ಇದಲ್ಲದೆ ದಿಲ್ಲಿ ಪೊಲೀಸ್ ಕಲ್ಯಾಣ ಸಂಘದ ವತಿಯಿಂದ ಹತ್ತು ಲಕ್ಷ ರೂ. ನೀಡಲಾಯಿತು.
ಕೊರೋನ ಸಾಂಕ್ರಾಮಿಕದ ಈ ಅವಧಿಯಲ್ಲಿ ಪೊಲೀಸರು ಹಾಗೂ ಪ್ಯಾರಾಮಿಲಿಟರಿ ಸಿಬ್ಬಂದಿಗಿರುವ ಅಪಾಯಗಳು, ಗಂಡಾಂತರಗಳು ಎಲ್ಲರಿಗೂ ತಿಳಿದ ವಿಷಯಗಳೇ ಆಗಿವೆ. ತಮ್ಮ ಹಾಗೂ ತಮ್ಮ ಕುಟುಂಬದವರಿಗೆ ಎದುರಾಗುವ ಗಂಭೀರ ಅಪಾಯಗಳನ್ನು ಎದುರಿಸಿ ಅವರು ಕಾನೂನು ಹಾಗೂ ವ್ಯವಸ್ಥೆಯನ್ನು ಕಾಪಾಡುತ್ತಿದ್ದಾರೆ. ನಿಯಮಗಳನ್ನು ಜನರು ಪಾಲಿಸುವಂತೆ ಮಾಡಿ ಜನರ ಪ್ರಾಣಗಳನ್ನು ರಕ್ಷಿಸು
ತ್ತಿದ್ದಾರೆ. ಹೀಗಾಗಿ ಕೊರೋನ ವೈರಾಣುವಿನ ವಿರುದ್ಧ ನಡೆಸಿದ ಅವರ ಪ್ರಯತ್ನಗಳನ್ನು ಗುರುತಿಸಿರುವುದರ ಸಂಕೇತವಾಗಿ ಕೇಂದ್ರ ಸರಕಾರ ಒಂದು ಪದಕವನ್ನು ಸ್ಥಾಪಿಸುವ ಮೂಲಕ ಅವರಲ್ಲಿ ಇನ್ನಷ್ಟು ನೈತಿಕ ಸ್ಥೈರ್ಯವನ್ನು ತುಂಬಬಹುದು. ಪೊಲೀಸ್ ಸಿಬ್ಬಂದಿಯೋರ್ವರ ಎದೆಯ ಮೇಲೆ ರಾರಾಜಿಸುವ ಪದಕಗಳ ಸಂಖ್ಯೆ ಅವರ ನೈತಿಕ ಸ್ಥೈರ್ಯ ಹೆಚ್ಚುವಂತೆ ಮಾಡುತ್ತದೆ. ಏನೆಂದರೂ, ಕೋವಿಡ್-19ರ ವಿರುದ್ಧ ಹೋರಾಡುವುದು ಸುಲಭದ ಕೆಲಸವಲ್ಲ. ಅಲ್ಲದೆ, ಕೇಂದ್ರ ಮತ್ತು ರಾಜ್ಯ ಸರಕಾರಗಳು ಈ ಪೊಲೀಸ್ ಸಿಬ್ಬಂದಿಯ ಮಕ್ಕಳಿಗೆ ನೌಕರಿಗಳನ್ನು ಮೀಸಲಿಡಬಹುದು. ಪೊಲೀಸ್ ಮತ್ತು ಸಿಎಪಿಎಫ್ ಸಿಬ್ಬಂದಿಯ ಆರೋಗ್ಯ ಮತ್ತು ವೈದ್ಯಕೀಯ ರಕ್ಷಣೆಗೆ ಸರಕಾರ ಗರಿಷ್ಠ ಆದ್ಯತೆ ನೀಡಬೇಕಾಗಿದೆ.
ಕೃಪೆ (the hindu)