×
Ad

“ಚಿತ್ರಹಿಂಸೆ ನೀಡಿದರು, ಚುಚ್ಚುಮದ್ದು ನೀಡಿ ಗರ್ಭಪಾತ ಮಾಡಿಸಿದರು”

Update: 2020-12-16 13:37 IST

ಮೊರಾದಾಬಾದ್, ಡಿ. 16: ಉತ್ತರ ಪ್ರದೇಶದ ಹೊಸ ಮತಾಂತರ ತಡೆ ಕಾಯಿದೆಯನ್ವಯ ‘ಲವ್ ಜಿಹಾದ್’ ಆರೋಪದ ಮೇಲೆ ಪತಿ ಇನ್ನೂ ಜೈಲಿನಲ್ಲೇ ಇದ್ದರೆ, ಸರಕಾರಿ ಆಶ್ರಯ ತಾಣದಲ್ಲಿ ಕೆಲವು ದಿನಗಳನ್ನು ಕಳೆಯಬೇಕಾದ 22 ವರ್ಷದ ಯುವತಿ 10 ದಿನಗಳ ನಂತರ  ಮನೆಗೆ ಮರಳಿದ್ದಾಳೆ. ಯುವತಿಯು ಸರಕಾರಿ ಆಶ್ರಯತಾಣದಲ್ಲಿದ್ದ ವೇಳೆ ಆರೋಗ್ಯ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಅಲ್ಲಿ ಚುಚ್ಚುಮದ್ದು ನೀಡಿದ ನಂತರ ಗರ್ಭಪಾತವಾಯಿತು ಹಾಗೂ ಅಲ್ಲಿಂದ ಬಿಡುಗಡೆಗೊಂಡಾಗ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ವರದಿಯನ್ನೂ ನೀಡಲಾಗಿಲ್ಲ ಎಂದು ಆರೋಪಿಸಿದ್ದಾಳೆ ಎಂದು timesofindia.com ವರದಿ ಮಾಡಿದೆ.

ಆದರೆ ಗರ್ಭಪಾತ ಮಾಡಿಸಲಾಯಿತು ಎಂಬ ಆರೋಪವನ್ನು ಆಸ್ಪತ್ರೆ ನಿರಾಕರಿಸಿದೆಯಾದರೂ ಆಕೆಗೆ ಕಾಣಿಸಿಕೊಂಡಿದ್ದ ಸಮಸ್ಯೆಯಿಂದಾಗಿ ಮಗುವಿಗೆ ಅಪಾಯವಿದೆ ಎಂದು ತೋರಿತ್ತು ಎಂದು ಹೇಳಿದೆ.

“ನನ್ನನ್ನು ಡಿಸೆಂಬರ್ 5ರಂದು ಅಪರಾಹ್ನ 2.30ಕ್ಕೆ ಸರಕಾರಿ ಆಶ್ರಯತಾಣಕ್ಕೆ ಕರೆದುಕೊಂಡು ಹೋಗಿ ಹಿಂಸೆ ನೀಡಲಾಯಿತು. ನನಗೆ ದಿಢೀರನೇ ಹೊಟ್ಟೆ ನೋವು ಕಾಣಿಸಿಕೊಂಡಾಗ ಡಿಸೆಂಬರ್ 11ರಂದು ಆಸ್ಪತ್ರೆಗೆ ಕರೆದುಕೊಂಡರು. ಅಲ್ಲಿ ವೈದ್ಯರು ಚುಚ್ಚುಮದ್ದು ನೀಡಿದ ನಂತರ ನನಗೆ ಸ್ವಲ್ಪ ರಕ್ತಸ್ರಾವವಾಗಲು ಆರಂಭಿಸಿತು. ಎರಡು ದಿನಗಳ ಬಳಿಕ ಇನ್ನೂ ನಾಲ್ಕು ಚುಚ್ಚುಮದ್ದು ನೀಡಲಾಯಿತು. ಆಗ ತೀವ್ರ ರಕ್ತಸ್ರಾವವಾಗಿ ಗರ್ಭಪಾತವಾಯಿತು, ಅಂದಿನಿಂದ ರಕ್ತಸ್ರಾವ ನಿಂತಿಲ್ಲ” ಎಂದು ಆಕೆ ಹೇಳುತ್ತಾಳೆ.

ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದಾಗ ವೈದ್ಯಕೀಯ ವರದಿಗಳನ್ನು ನೀಡಲಾಗಿಲ್ಲ ಎಂದೂ ಆಕೆ ದೂರಿದ್ದಾಳೆ. ಮಂಗಳವಾರ ಆಕೆಗೆ ಮತ್ತೆ ಅನಾರೋಗ್ಯ ಕಾಡಿದಾಗ ಖಾಸಗಿ ಕ್ಲಿನಿಕ್‍ಗೆ ತೆರಳಿದ್ದರೂ ಮೆಡಿಕಲ್ ರಿಪೋರ್ಟ್ ಇಲ್ಲದೇ ಇದ್ದುದರಿಂದ ಮೊರಾದಾಬಾದ್‍ನ ಖಾಸಗಿ ಲ್ಯಾಬ್‍ನಲ್ಲಿ ಮತ್ತೊಮ್ಮೆ ಅಲ್ಟ್ರಾಸೌಂಡ್ ನಡೆಸಲಾಗಿದ್ದು ಬುಧವಾರ ವರದಿ ದೊರೆಯಲಿದೆ ಎಂದು ಆಕೆಯ ಮಾವ ಹೇಳಿದ್ದಾರೆ.

ಆದರೆ ಯುವತಿ ಮಾಡಿದ ಆರೋಪಗಳನ್ನು ಆಕೆ ದಾಖಲಾಗಿದ್ದ ಜಿಲ್ಲಾಸ್ಪತ್ರೆಯ ಹಂಗಾಮಿ ಮುಖ್ಯ ವೈದ್ಯಕೀಯ ಅಧೀಕ್ಷಕಿ ಹಾಗೂ ಹಿರಿಯ ಸ್ತ್ರೀರೋಗ ತಜ್ಞೆ ಡಾ ನಿರ್ಮಲಾ ಪಾಠಕ್ ನಿರಾಕರಿಸಿದ್ದಾರೆ. “ಆಕೆ ಇಲ್ಲಿಗೆ ಬಂದಾಗ ಹೊಟ್ಟೆ ನೋವು ಹಾಗೂ ಲಘು ರಕ್ತಸ್ರಾವವಿತ್ತು. ಆಕೆಗೆ ಇತೆಮಿಸೈಲೇಟ್ ಚುಚ್ಚುಮದ್ದು (ರಕ್ತಸ್ರಾವ ತಡೆಗಾಗಿ) ನೀಡಲಾಗಿತ್ತು ಹಾಗೂ ನೋವಿಗೆ ಔಷಧಿಯೂ ನೀಡಲಾಗಿತ್ತು,” ಎಂದು ಹೇಳಿಕೆ ನೀಡಿದ್ದಾರೆ.

ಟ್ರಾನ್ಸ್-ವೆಜೈನಲ್ ಸ್ಕ್ಯಾನ್ ನಡೆಸಲು ಆಕೆಗೆ ಲಾಲಾ ಲಜಪತ್ ರಾಯ್ ಮೆಡಿಕಲ್ ಕಾಲೇಜಿಗೆ ಹೋಗಲು ‘ರೆಫರೆಲ್ ಸ್ಲಿಪ್’ ನೀಡಲಾಗಿತ್ತು ಎಂದೂ ಆಕೆ ಹೇಳಿದ್ದಾರೆ. ಆಕೆಯನ್ನು ಡಿಸ್ಚಾರ್ಜ್‍ ಗೊಳಿಸುವಾಗ ಆಕೆಯ ಮೆಡಿಕಲ್ ರಿಪೋರ್ಟ್ ಏಕೆ ನೀಡಿಲ್ಲ ಎಂಬ ಪ್ರಶ್ನೆಗೆ, ಇಂತಹ ಪ್ರಕರಣಗಳಲ್ಲಿ ವರದಿಯನ್ನು ಪೊಲೀಸರಿಗೆ ನೀಡಲಾಗುವುದು. ಆಕೆ ಅರ್ಜಿ ಸಲ್ಲಿಸಿದರೆ ಆಕೆಗೆ ಒಂದು ಪ್ರತಿ ನೀಡಲಾಗುವುದು ಎಂದರು.

ಗರ್ಭಪಾತ ಕುರಿತ ಪ್ರಶ್ನೆಗೆ “ಆಕೆ ಇಲ್ಲಿಗೆ ಬರುವಾಗ ಹೊಟ್ಟೆ ನೋವು ಹಾಗೂ ರಕ್ತಸ್ರಾವವಿದ್ದುದರಿಂದ ಮಗುವಿಗೆ ಅಪಾಯವಿತ್ತು” ಎಂದಷ್ಟೇ ಹೇಳಿದರು.

ಆಕೆಯಿದ್ದ ಆಶ್ರಯತಾಣದ ಸಿಬ್ಬಂದಿ ಅಲ್ಲಿ ಆಕೆಗೆ ಕಿರುಕುಳ ನೀಡಲಾಗಿತ್ತು ಎಂಬ ಆರೋಪವನ್ನು ನಿರಾಕರಿಸಿದ್ದಾರೆ. ಸದ್ಯ ಮಹಿಳೆ ತನ್ನ ಪತಿ ಆದಷ್ಟು ಬೇಗ ಬಂಧನದಿಂದ ಬಿಡುಗಡೆಯಾಗಬಹುದೆಂಬ ನಿರೀಕ್ಷೆಯಲ್ಲಿದ್ದಾಳೆ. “ನಮ್ಮ ಜೀವನ ಎಂದಿನಂತಾಗುವಂತಾಗಲು, ಬಜರಂಗದಳದಿಂದ ಯಾವುದೇ ಸಮಸ್ಯೆಯಾಗದಂತೆ ರಕ್ಷಣೆ ಬೇಕಿದೆ” ಎಂಬ ಯುವತಿಯ ಹೇಳಿಕೆಯನ್ನು timesofindia.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News