ಒವೈಸಿಯನ್ನು ಖರೀದಿಸುವವನು ಇನ್ನೂ ಹುಟ್ಟಿಲ್ಲ: ಮಮತಾಗೆ ತಿರುಗೇಟು ನೀಡಿದ ಎಐಎಂಐಎಂ ಮುಖ್ಯಸ್ಥ

Update: 2020-12-16 09:33 GMT

ಹೈದರಾಬಾದ್,ಡಿ.16 “ಬಿಜೆಪಿ ಪಕ್ಷವು ಕೋಟಿಗಟ್ಟಲೆ ಹಣ ಸುರಿದು ಹೈದರಾಬಾದ್ ನಲ್ಲಿರುವ ಪಕ್ಷವೊಂದನ್ನು ಮುಸ್ಲಿಮರ ಮತಗಳನ್ನು ವಿಭಜಿಸುವುದಕ್ಕಾಗಿ ಪಶ್ಚಿಮ ಬಂಗಾಳದಲ್ಲಿ ಚುನಾವಣೆಗೆ ಸ್ಪರ್ಧಿಸಲು ಕರೆ ತರುತ್ತಿದೆ” ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸದುದ್ದೀನ್ ಒವೈಸಿ “ಒವೈಸಿಯನ್ನು ಹಣ ನೀಡಿ ಖರೀದಿಸುವವನು ಇನ್ನೂ ಹುಟ್ಟಿಲ್ಲ” ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

“ಒವೈಸಿಯನ್ನು ಹಣ ನೀಡಿ ಖರೀದಿಸುವ ವ್ಯಕ್ತಿ ಇನ್ನೂ ಹುಟ್ಟಿಲ್ಲ. ಮಮತಾ ಬ್ಯಾನರ್ಜಿಯವರು ಇಲ್ಲ ಸಲ್ಲದ ಆಪಾದನೆಗಳನ್ನು ಹೊರಿಸುತ್ತಿದ್ದಾರೆ. ಅವರು ಮೊದಲು ತಮ್ಮ ಮನೆಯನ್ನು ಸರಿಪಡಿಸಲಿ. ಈಗಾಗಲೇ ಅವರ ಪಕ್ಷದಲ್ಲಿದ್ದ ಹಲವಾರು ಮಂದಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಅವರು ಬಿಹಾರದ ಮತ್ತು ನಮ್ಮ ಪಕ್ಷದ ಮತದಾರರಿಗೆ ಅವಮಾನ ಮಾಡಿದ್ದಾರೆ” ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಬಿಹಾರದ ಚುನಾವಣೆಯಲ್ಲಿ ಉತ್ತಮ ಪ್ರದರ್ಶನವನ್ನು ತೋರಿದ್ದ ಆಲ್ ಇಂಡಿಯಾ ಮಜ್ಲಿಸೇ ಇತ್ತಿಹಾದುಲ್ ಮುಸ್ಲಿಮೀನ್ ಪಕ್ಷವು ಸದ್ಯ ಪಶ್ಚಿಮ ಬಂಗಾಳದಲ್ಲೂ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದು www.ndtv.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News