ರಾಜಸ್ಥಾನದ ಆದಿವಾಸಿ ಪ್ರದೇಶಗಳಲ್ಲಿ ಬಿಟಿಪಿ ಪಕ್ಷದ ಜನಪ್ರಿಯತೆಯಿಂದ ಕಂಗೆಟ್ಟಿರುವ ಕಾಂಗ್ರೆಸ್-ಬಿಜೆಪಿ
ಜೈಪುರ್,ಡಿ.16: ರಾಜಸ್ಥಾನದ ದುಂಗರ್ಪುರ್ ಜಿಲ್ಲಾ ಪ್ರಮುಖ್ ಆಗಿ ಬಿಜೆಪಿಯ ಸೂರ್ಯ ಆಹರಿ ಅವರನ್ನು ಆರಿಸಲು ಕಾಂಗ್ರೆಸ್ ಮತ್ತು ಬಿಜೆಪಿ ಕೈಜೋಡಿಸಿದ ಅಪರೂಪದ ವಿದ್ಯಮಾನ ಇತ್ತೀಚೆಗೆ ನಡೆದಿತ್ತು.
ದುಂಗರ್ಪುರ್ ಜಿಲ್ಲಾ ಪರಿಷದ್‍ನ 27 ಸ್ಥಾನಗಳ ಪೈಕಿ 13ರಲ್ಲಿ ಭಾರತೀಯ ಟ್ರೈಬಲ್ ಪಾರ್ಟಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿಗಳು ವಿಜಯಿಯಾಗಿದ್ದರೆ, ಬಿಜೆಪಿ ಮತ್ತು ಕಾಂಗ್ರೆಸ್ ಕ್ರಮವಾಗಿ ಎಂಟು ಮತ್ತು ಆರು ಸ್ಥಾನಗಳನ್ನು ಗಳಿಸಿದ್ದವು. ಭಾರತೀಯ ಟ್ರೈಬಲ್ ಪಾರ್ಟಿ ಒಬ್ಬನೇ ಒಬ್ಬ ಸಂಸದನನ್ನು ಹೊಂದಿಲ್ಲದ ಕಾರಣ ಅದು ತನ್ನ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಾಧ್ಯವಾಗದೆ ಅವರನ್ನು ಪಕ್ಷೇತರರನ್ನಾಗಿ ಕಣಕ್ಕಿಳಿಸಿತ್ತು.
ರಾಜ್ಯಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಾಗೂ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ನಡುವೆ ನಡೆದ ಜಟಾಪಟಿ ಸಂದರ್ಭವೂ ಕಾಂಗ್ರೆಸ್ ಪಕ್ಷವನ್ನು ಬಿಟಿಪಿ ಬೆಂಬಲಿಸಿದ್ದರಿಂದ ಕಾಂಗ್ರೆಸ್ ಪಕ್ಷದ ಒಬ್ಬರ ಬೆಂಬಲದೊಂದಿಗೆ ಜಿಲ್ಲಾ ಪರಿಷದ್ ಮಂಡಳಿ ರಚಿಸಲು ಯಶಸ್ವಿಯಾಗಬಹುದೆಂಬ ಬಿಟಿಪಿ ನಿರೀಕ್ಷೆ ಹುಸಿಯಾಗಿತ್ತು. ಅನಿರೀಕ್ಷಿತ ಬೆಳವಣಿಗೆಯಲ್ಲಿ ಸೂರ್ಯ ಅವರನ್ನು ಜಿಲ್ಲಾ ಪ್ರಮುಖ್ ಆಗಿ ಆರಿಸಲು ಬಿಜೆಪಿಗೆ ಬೆಂಬಲ ನೀಡಲು ಕಾಂಗ್ರೆಸ್ ಮುಂದೆ ಬಂದಿತ್ತು. ಸೂರ್ಯ ಅವರಿಗೆ ಬಿಜೆಪಿ-ಕಾಂಗ್ರೆಸ್ ಪಕ್ಷದ 14 ಮತಗಳು ದೊರೆತರೆ ಬಿಟಿಪಿ ಬೆಂಬಲಿತ ಪಾರ್ವತಿ ದೇವಿ ಅವರಿಗೆ 13 ಮತಗಳು ದೊರಕಿದ್ದವು.
ದುಂಗರ್ಪುರ್‍ನಲ್ಲಿ ಬಿಟಿಪಿಯ ಹೆಚ್ಚುತ್ತಿರುವ ಜನಪ್ರಿಯತೆ ಕಾಂಗ್ರೆಸ್ ಹಾಗೂ ಬಿಜೆಪಿಗೆ ತಲೆನೋವಾಗಿ ಕಾಡುತ್ತಿದೆ ಎಂಬುದು ಈ ವಿದ್ಯಮಾನದಿಂದ ಸ್ಪಷ್ಟ. ದುಂಗರ್ಪುರ್ ಹೊರತಾಗಿ ಹತ್ತಿರದ ಆದಿವಾಸಿ ಪ್ರದೇಶಗಳಾದ ಬನಸ್ವಾರ, ಪ್ರತಾಪಘಡ ಮತ್ತು ಉದಯಪುರದಲ್ಲೂ ಬಿಟಿಪಿ ತನ್ನ ಪ್ರಭಾವ ಬೀರಲು ಯತ್ನಿಸುತ್ತಿರುವುದೂ ಕಾಂಗ್ರೆಸ್ ಮತ್ತು ಬಿಜೆಪಿಗೆ ಸಹಿಸಲಾಗುತ್ತಿಲ್ಲ ಎಂದು thewire.in ವರದಿ ಮಾಡಿದೆ.
ದಕ್ಷಿಣ ರಾಜಸ್ಥಾನದಲ್ಲಿ ಭಿಲ್ ಆದಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು ಇಲ್ಲಿ ಕೂಡ ಬಿಟಿಪಿ ಜನಪ್ರಿಯವಾಗಿದೆ. 2018ರಲ್ಲಿ ದುಂಗರ್ಪುರದಲ್ಲಿನ ಚೊರಸಿ ಮತ್ತು ಸಗ್ವಾರ ಸೇರಿದಂತೆ ನಾಲ್ಕು ಎಸ್‍ಸಿ/ಎಸ್‍ಟಿ ಮೀಸಲು ಕ್ಷೇತ್ರಗಳಲ್ಲಿ ಬಿಟಿಪಿ ಎರಡರಲ್ಲಿ ಸುಲಭ ಜಯ ಸಾಧಿಸಿತ್ತು. 2013ರ ಚುನಾವಣೆಯಲ್ಲಿ ಎಲ್ಲಾ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದರೆ 2008 ರ ಚುನಾವಣೆಯಲ್ಲಿ ಕಾಂಗ್ರೆಸ್ ನಾಲ್ಕರಲ್ಲಿಯೂ ಗೆದ್ದಿತ್ತು.
ದುಂಗರ್ಪುರ್‍ನ ಆದಿವಾಸಿಗಳ ಹಿತರಕ್ಷಣೆಗೆ ಬಿಟಿಪಿ ಶ್ರಮಿಸುತ್ತಿರುವುದರಿಂದಲೇ ಅದು ಜನಪ್ರಿಯವಾಗುತ್ತಿದೆ. ಈ ಹಿಂದಿನ ಕಾಂಗ್ರೆಸ್ ಮತ್ತು ಬಿಜೆಪಿ ಸರಕಾರಗಳು ತಮ್ಮನ್ನು ನಿರ್ಲಕ್ಷ್ಯಿಸಿವೆ ಎಂಬ ಭಾವನೆಯೂ ಆದಿವಾಸಿ ಜನಾಂಗಗಳಿಗೆ ಇರುವುದರಿಂದ ಅವರು ಬಿಟಿಪಿಯನ್ನು ಬೆಂಬಲಿಸಲು ಆರಂಭಿಸಿದ್ದಾರೆ. ಬಿಟಿಪಿ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವುದಕ್ಕಿಂತ ಮುಂಚೆ ದುಂಗರ್ಪುರ್ ಆದಿವಾಸಿ ಪ್ರದೇಶಗಳಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯವೂ ಇರಲಿಲ್ಲ. ಇದೇ ಕಾರಣಕ್ಕೆ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಹಲವು ಯೋಜನೆಗಳ ಆಶ್ವಾಸನೆ ನೀಡಿತ್ತು ಎನ್ನಲಾಗಿದೆ.
ಬಿಟಿಪಿಯ ಇಬ್ಬರು ಶಾಸಕರು ರಾಜ್ಯಸಭಾ ಚುನಾವಣೆಯಲ್ಲಿ ಹಾಗೂ ಸದನದಲ್ಲಿ ಗೆಹ್ಲೋಟ್ ಸರಕಾರಕ್ಕೆ ಬಹುಮತ ಸಾಬೀತು ಪಡಿಸುವ ವೇಳೆ ಬೆಂಬಲ ನೀಡಲು ತಲಾ 5 ಕೋಟಿ ರೂ. ಪಡೆದಿದ್ದಾರೆ ಎಂದು ಬಗಿದೊರ ಕ್ಷೇತ್ರದ ಕಾಂಗ್ರೆಸ್ ಶಾಸಕ ಮಹೇಂದ್ರ ಜೀತ್ ಮಾಳವಿಯ ಆರೋಪಿಸಿದ ನಂತರ ಕಾಂಗ್ರೆಸ್ ಹಾಗೂ ಬಿಟಿಪಿ ನಡುವಿನ ಸಂಬಂಧ ಹಳಸಿತ್ತು.
ದುಂಗರ್ಪುರ್‍ನಲ್ಲಿ ಕಾಂಗ್ರೆಸ್-ಬಿಜೆಪಿ ಕೈಜೋಡಿಸಿರುವುದು ಹಲವು ಕಾಂಗ್ರೆಸ್ಸಿಗರಿಗೆ ಇಷ್ಟವಾಗಿಲ್ಲ. ಅತ್ತ ಬಿಟಿಪಿ ಸ್ಥಾಪಕ ಛೋಟುಬಾಯಿ ವಾಸವ ಈ ಕುರಿತು ಮಾತನಾಡಿ, “ಕಾಂಗ್ರೆಸ್-ಬಿಜೆಪಿ ಒಂದೇ ಎಂಬುದನ್ನು ಈ ಘಟನೆ ಸಾಬೀತುಪಡಿಸಿದೆ” ಎಂದಿದ್ದಾರೆ.