ಮಂಡಳಿ ಪರೀಕ್ಷೆ: ಕೇಂದ್ರ ಶಿಕ್ಷಣ ಸಚಿವ-ಶಿಕ್ಷಕರ ನಡುವಿನ ಸಂವಹನ ಡಿ. 22ಕ್ಕೆ ಮುಂದೂಡಿಕೆ

Update: 2020-12-17 18:05 GMT

 ಹೊಸದಿಲ್ಲಿ, ಡಿ. 17: ಮುಂದಿನ ವರ್ಷ ನಡೆಯಲಿರುವ ಮಂಡಳಿ ಪರೀಕ್ಷೆ ಕುರಿತ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೊಖ್ರಿಯಾಲ್ ನಿಶಾಂಕ್ ಹಾಗೂ ಶಿಕ್ಷಕರ ನಡುವಿನ ಸವಂಹನ ಡಿಸೆಂಬರ್ 22ಕ್ಕೆ ಮುಂದೂಡಲಾಗಿದೆ.

‘‘ಶಿಕ್ಷಕರೇ, ಡಿಸೆಂಬರ್ 22ರಂದು 4 ಗಂಟೆಗೆ ನಿಮ್ಮೆಲ್ಲರೊಂದಿಗೆ ಒಳನೋಟದ ಸಂವಹನ ನಡೆಸಲು ಎದುರು ನೋಡುತ್ತಿದ್ದೇನೆ’’ ಎಂದು ನಿಶಾಂಕ್ ಅವರು ಗುರುವಾರ ಟ್ವೀಟ್‌ನಲ್ಲಿ ಹೇಳಿದ್ದಾರೆ.

ಡಿಸೆಂಬರ್ 10ರಂದು ಸಚಿವರು ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿದ್ದರು ಹಾಗೂ ಮಂಡಳಿ ಪರೀಕ್ಷೆ ನಡೆಸುವ ಬಗೆಗಿನ ವಿವಿಧ ಪ್ರಶ್ನೆಗಳಿಗೆ ಉತ್ತರ ನೀಡಿದ್ದರು. ಮಂಡಳಿ ಪರೀಕ್ಷೆಯ ದಿನಾಂಕದ ಬಗ್ಗೆ ಇದುವರೆಗೆ ಯಾವುದೇ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ.

 10 ಹಾಗೂ 12ನೇ ತರಗತಿಯ ಮಂಡಳಿ ಪರೀಕ್ಷೆಯ ದಿನಾಂಕ ನಿಗದಿಪಡಿಸುವ ಬಗ್ಗೆ ಸಂಬಂಧಿತರೊಂದಿಗೆ ಮಾತುಕತೆ ಪ್ರಗತಿಯಲ್ಲಿದೆ. ಅವರ ಪ್ರತಿಕ್ರಿಯೆಯ ಆಧಾರದ ಮೇಲೆ ಶೀಘ್ರದಲ್ಲಿ ದಿನಾಂಕ ಘೋಷಿಸಲಾಗುವುದು ಎಂದು ನಿಶಾಂಕ್ ಅವರ ಸಂವಹನ ಸಂದರ್ಭ ಹೇಳಿದ್ದರು.

 ‘‘ಪ್ರಾಯೋಗಿಕ ಪರೀಕ್ಷೆ ಸೇರಿದಂತೆ ಮಂಡಳಿ ಪರೀಕ್ಷೆಯ ದಿನಾಂಕದ ಕುರಿತು ಸಿಬಿಎಸ್‌ಇ ಇನ್ನಷ್ಟೇ ನಿರ್ಧಾರ ತೆಗೆದುಕೊಳ್ಳಬೇಕಿದೆ. ಪರೀಕ್ಷೆಯ ಮುನ್ನ ತರಗತಿಯಲ್ಲಿ ಪ್ರಾಯೋಗಿಕ ಪರೀಕ್ಷೆಯಲ್ಲಿ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಪರ್ಯಾಯ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುವುದು’’ ಎಂದು ಅವರು ತಿಳಿಸಿದ್ದರು.

2021ರಲ್ಲಿ ಮಂಡಳಿ ಪರೀಕ್ಷೆಯನ್ನು ಲಿಖಿತ ವಿಧಾನದಲ್ಲಿ ನಡೆಸಲಾಗುವುದು. ಆನ್‌ಲೈನ್‌ನಲ್ಲಿ ಅಲ್ಲ ಎಂದು ಸಿಬಿಎಸ್‌ಇ ಈ ತಿಂಗಳ ಆರಂಭದಲ್ಲಿ ಘೋಷಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News