×
Ad

ಸ್ಪಶ್ಯ-ಅಸ್ಪೃಶ್ಯ ಎಂಬ ತಾರತಮ್ಯ ಬೇಡ

Update: 2020-12-18 23:19 IST

ಮಾನ್ಯರೇ,
ವರ್ಣ ವ್ಯವಸ್ಥೆಯಿಂದ ಸಾಮಾಜಿಕ ವಿಘಟನೆಯಾಗಿರುವುದು ಇತಿಹಾಸದಲ್ಲಿನ ಸತ್ಯ ಸಂಗತಿ ಅಲ್ಲವೇ. ಋಗ್ವೇದದ ಹತ್ತನೆಯ ಮಂಡಲದಲ್ಲಿ ಪೋಲಕಲ್ಪಿತವಾಗಿ ಮನುಷ್ಯರನ್ನು ವಿಂಗಡಿಸಿದ ಸ್ಪಷ್ಟತೆ ಇರುವುದು ಸುಳ್ಳಾ? ಯಜ್ಞ-ಯಾಗಗಳಲ್ಲಿ ಆಹಾರ ಧಾನ್ಯ, ಹಾಲು, ತುಪ್ಪ, ಗೋವುಗಳನ್ನು ಬಲಿ ಕೊಡುತ್ತಿದ್ದರು ಎನ್ನುವುದು ಸತ್ಯವಲ್ಲವೇ. ಸಂಸ್ಕೃತ ಶ್ಲೋಕಗಳ ಮೂಲಕವೇ ಮಂತ್ರಗಳನ್ನು ಪಟಿಸಲಾಗುತ್ತಿತ್ತು. ಸಂಸ್ಕೃತ ಕಲಿಕೆ ಕೇವಲ ಒಂದು ಸಮುದಾಯಕ್ಕೆ ಮೀಸಲಾಗಿತ್ತು. ಅದನ್ನು ದೈವ ಭಾಷೆಯೆಂದು ಪರಿಗಣಿಸಲಾಗಿತ್ತು ಎನ್ನುವ ಇತಿಹಾಸದ ಮಾಹಿತಿಗಳು ಸುಳ್ಳು ಎಂದು ಹೇಳುವುದು ಎಷ್ಟರ ಮಟ್ಟಿಗೆ ಸರಿ. ಇವುಗಳನ್ನು ಸುಳ್ಳು ಎಂದು ಹೇಳುವುದಾದರೆ ವೇದಗಳನ್ನು ರಚಿಸಿ ವರ್ಣ ವ್ಯವಸ್ಥೆಯನ್ನು ಆರಂಭಿಸಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂದು ಮನುಷ್ಯರನ್ನು ವಿಂಗಡಿಸಿದ್ದು ಯಾರು? ಯಜ್ಞ-ಯಾಗಗಳನ್ನು ಆಚರಣೆಗೆ ತಂದವರಾರು? ಮತ್ತು ಯಜ್ಞಗಳನ್ನು ಮಾಡುವಾಗ ಅದರಲ್ಲಿ ಏನನ್ನು ಅರ್ಪಿಸುತ್ತಿದ್ದರು? ಸಂಸ್ಕೃತ ಭಾಷೆಯನ್ನು ಎಲ್ಲರಿಗೂ ಕಲಿಯಲು ಯಾಕೆ ಅವಕಾಶಗಳು ಇರಲ್ಲಿ? ಒಂದು ಸಮುದಾಯವನ್ನು ಊರಾಚೆ ಇಟ್ಟವರಾರು? ಅವರನ್ನು ಅಸ್ಪ್ರಶ್ಯರನ್ನಾಗಿಸಿದವರಾರು? ಕೇರಳದ ನಂಗೇಲಿ ಕಥೆಯನ್ನು ತಾವು ಕೇಳಿರುತ್ತೀರಾ. ಕೇರಳದಲ್ಲಿ ಅಸ್ಪಶ್ಯ ಸಮುದಾಯದ ಹೆಣ್ಣು ಮಕ್ಕಳ ಮೇಲೆ ಸ್ತನ ತೇರಿಗೆ ಹಾಕಿದವರಾರು? ದೇಶದಲ್ಲಿ ಮಡಿ-ಮೈಲಿಗೆ, ಸ್ಪಶ್ಯ-ಅಸ್ಪೃಶ್ಯ, ಕೆಳಜಾತಿ- ಮೇಲ್ಜಾತಿ ಎನ್ನುವ ತಾರತಮ್ಯದ ಸಾಮಾಜಿಕ ವ್ಯವಸ್ಥೆಯನ್ನು ಸೃಷ್ಟಿಸಿದವರು ಯಾರು? ಎನ್ನುವ ಆನೇಕ ಪ್ರಶ್ನೆಗಳಿಗೆ ಸ್ಪಷ್ಟನೆಯನ್ನು ಸರಕಾರ ನೀಡಲಿ ಮತ್ತು ಈ ಪ್ರಶ್ನೆಗಳು ಪಠ್ಯಕ್ರಮದಲ್ಲಿ ಅಳವಡಿಸಿ, ಅದಕ್ಕೆ ಉತ್ತರ ಸರಕಾರವೇ ನೀಡಲಿ.

ಸತ್ಯವನ್ನು ಸುಳ್ಳೆಂದು ಹೇಳುವುದು ಮನುಷ್ಯತ್ವದ ನಡೆಯಲ್ಲ. ಸತ್ಯಕ್ಕೆ ಸಂಕಷ್ಟಗಳು ಜಾಸ್ತಿ ಇದ್ದರೂ ಕೊನೆಗೆ ಗೆಲ್ಲುವುದು ಸತ್ಯವೇ ಎನ್ನುವುದಕ್ಕೆ ಇತಿಹಾದಲ್ಲಿ ಸಾಕಷ್ಟು ಉದಾಹರಣೆಗಳಿವೆ. ‘ಇದ್ದದ್ದು ಇದ್ದ ಹಾಗೆ ಹೇಳಿದರೆ ಎದೆಗೆ ಒದ್ದಂತೆ’ ಎನ್ನುವ ಗಾದೆ ಮಾತಿನ ಸಾರವನ್ನು ಇವತ್ತು ಇತಿಹಾಸವನ್ನು ತಿರುಚಲು ಹೊರಟಿರುವ ವ್ಯವಸ್ಥೆಯಲ್ಲಿ ಕಾಣಬಹುದಾಗಿದೆ. ಸತ್ಯ ಸುಳ್ಳಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸರಕಾರದ ಮೇಲಿದ್ದು, ಅದನ್ನು ಸರಿಯಾಗಿ ನಿಭಾಯಿಸುವಂತಾಗಲಿ. 

Writer - ನಾಗೇಶ್ ಹರಳಯ್ಯ, ಕಲಬುರಗಿ

contributor

Editor - ನಾಗೇಶ್ ಹರಳಯ್ಯ, ಕಲಬುರಗಿ

contributor

Similar News