ಹೊಸದಿಲ್ಲಿಯ ಸಿಖ್ ಗುರುದ್ವಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ

Update: 2020-12-20 07:39 GMT

ಹೊಸದಿಲ್ಲಿ,ಡಿ.20: ಸಿಖ್ ಸಮುದಾಯಕ್ಕೆ ಸೇರಿದ ಲಕ್ಷಾಂತರ ರೈತರು ನೂತನ ಕೃಷಿ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದು, ಸದ್ಯ ಪ್ರತಿಭಟನೆಯು 25ನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ಇದೀಗ ಪ್ರಧಾನಿ ನರೇಂದ್ರ ಮೋದಿ ಹೊಸದಿಲ್ಲಿಯಲ್ಲಿರುವ ಗುರುದ್ವಾರ ರಕಬ್ ಗಂಜ್ ಸಾಹಿಬ್ ಗೆ ಭೇಟಿ ನೀಡಿದ್ದು, ಫೋಟೊಗಳನ್ನು ತಮ್ಮ ಸಾಮಾಜಿಕ ತಾಣದ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.

“ಗುರುದ್ವಾರ ರಕಬ್ ಗಂಜ್ ಸಾಹಿಬ್ ನಲ್ಲಿರುವ ಶ್ರೀ ಗುರು ತೇಗ್ ಬಹದ್ದೂರ್ ರಿಗೆ ಇಂದು ನಾನು ಗೌರವ ನಮನ ಸಲ್ಲಿಸಿದೆ. ಅವರು ಹಿಂದೂ ಧರ್ಮವನ್ನು ಉಳಿಸುವ ಸಲುವಾಗಿ ಹಲವಾರು ಕಾರ್ಯಗಳನ್ನು ಮಾಡಿದ್ದು, ಸಾಮರಸ್ಯದ ಸಂದೇಶ ನೀಡಿದ್ದಾರೆ. ಅವರ ಜೀವನದಲ್ಲಿ ಧೈರ್ಯ ಮತ್ತು ಸಹಾನುಭೂತಿ ಗುಣಗಳು ತುಂಬಿತ್ತು. ಅವರ ಹುತಾತ್ಮ ದಿನದಂದು ನಾನು ಅವರಿಗೆ ತಲೆಬಾಗುತ್ತೇನೆ” ಎಂದು ತಮ್ಮ ಸಾಮಾಜಿಕ ತಾಣ ಖಾತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಸಾಮಾಜಿಕ ತಾಣದಲ್ಲಿ ಪ್ರಧಾನಿಯವರ ಪೋಸ್ಟ್ ಗೆ ಹಲವಾರು ಮಂದಿ ಕಮೆಂಟ್ ಮಾಡಿದ್ದು, “ಹಲವಾರು ರೈತರು 6 ಡಿಗ್ರಿ ಚಳಿಯಲ್ಲಿ ನಡುಗುತ್ತಾ ಪ್ರತಿಭಟನೆ ನಡೆಸುತ್ತಿದ್ದಾರೆ. ಈಗಾಗಲೇ 30+ ಮಂದಿ ಮೃತಪಟ್ಟಿದ್ದಾರೆ. ರೈತರ ಕುರಿತು ಅಪಮಾನಕಾರಿ ಹೇಳಿಕೆಗಳನ್ನು ನೀಡುವ ಬದಲು ಅವರ ತೊಂದರೆಗಳನ್ನು ಪರಿಹರಿಸಿ. ಗುರು ತೇಜ್ ಬಹದ್ದೂರ್ ರವರು ಮಾನವ ಹಕ್ಕುಗಳಿಗಾಗಿ ಜೀವತ್ಯಾಗ ಮಾಡಿದ್ದಾರೆ. ನಿಜವಾದ ಗೌರವಾರ್ಪಣೆ ಅಂದರೇನು ಅನ್ನುವುದು ನಿಮಗೆ ಮನದಟ್ಟಾಗಬಹುದು” ಎಂದು ಬಳಕೆದಾರರು ಟ್ವಿಟರ್ ನಲ್ಲಿ ಕಮೆಂಟ್ ಮಾಡಿದ್ದಾರೆ. “ನೀವು ಅದೆಷ್ಟು ನಾಟಕ ಮಾಡುತ್ತಿದ್ದೀರಿ. ಆದರ್ಶದ ಮಾತನ್ನಾಡುವಾಗ ಸ್ವತಃ ಆದರ್ಶವನ್ನು ಪಾಲಿಸಬೇಕು. ಚಳಿಯಲ್ಲಿ ಕೂತು ಹೋರಾಡುತ್ತಿರುವ ರೈತರನ್ನು ಮೊದಲು ಭೇಟಿಯಾಗಿ ಎಂದು ಇನ್ನೋರ್ವ ಬಳಕೆದಾರರು ಕಮೆಂಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News