×
Ad

2020ರಲ್ಲಿ ಮಹಿಳಾ ಆಯೋಗಕ್ಕೆ 5,000ಕ್ಕೊ ಹೆಚ್ಚು ಕೌಟುಂಬಿಕ ಹಿಂಸೆ ದೂರುಗಳು

Update: 2020-12-25 19:46 IST

ಹೊಸದಿಲ್ಲಿ,ಡಿ.25 : ಮಹಿಳೆಯರ ವಿರುದ್ಧ ಕೌಟುಂಬಿಕ ಹಿಂಸೆಯು 2020 ರಲ್ಲಿಯೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಪಾಲಿಗೆ ಮುಖ್ಯ ಕಳವಳವಾಗಿ ಉಳಿದುಕೊಂಡಿದೆ. ಈ ವರ್ಷ ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯು)ದಲ್ಲಿ ಇಂತಹ 5,000ಕ್ಕೂ ಅಧಿಕ ದೂರುಗಳು ದಾಖಲಾಗಿವೆ.

ಮಾರ್ಚ್‌ನಲ್ಲಿ ಕೊರೋನ ವೈರಸ್ ಲಾಕ್‌ಡೌನ್ ಹೇರಿಕೆಯ ಬಳಿಕ ಆಯೋಗಕ್ಕೆ ಮಹಿಳೆಯರ ವಿರುದ್ಧ ಕೌಟುಂಬಿಕ ಹಿಂಸಾಚಾರದ ದೂರುಗಳ ಮಹಾಪೂರವೇ ಹರಿದು ಬಂದಿತ್ತು. ಲಾಕ್‌ಡೌನ್, ಮಹಿಳೆಯರು ತಮಗೆ ಕಿರುಕುಳ ನೀಡುವವರೊಂದಿಗೆ ಮನೆಯಲ್ಲಿಯೇ ಇರುವುದನ್ನು ಅನಿವಾರ್ಯವಾಗಿಸಿತ್ತು. ಬಳಿಕ ದೂರುಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು,ಜುಲೈನಲ್ಲಿ 660ರಷ್ಟು ದಾಖಲೆ ಪ್ರಮಾಣದಲ್ಲಿ ದೂರುಗಳು ದಾಖಲಾಗಿದ್ದವು.

ಹಣಕಾಸು ಅಭದ್ರತೆ,ಆರ್ಥಿಕ ಅಸ್ಥಿರತೆ ಮತ್ತು ಪ್ರತ್ಯೇಕತೆ ಇತ್ಯಾದಿ ದೂರುಗಳ ಸಂಖ್ಯೆ ಹೆಚ್ಚಲು ಕಾರಣಗಳಾಗಿವೆ ಎಂದು ತಿಳಿಸಿದ ಎನ್‌ಸಿಡಬ್ಲು ಅಧ್ಯಕ್ಷೆ ರೇಖಾ ಶರ್ಮಾ, ಕೌಟುಂಬಿಕ ಹಿಂಸಾಚಾರದ ಬಲಿಪಶುಗಳು ತಮ್ಮ ಎಂದಿನ ಬೆಂಬಲ ವ್ಯವಸ್ಥೆಯಿಂದ ದೂರ ಮಾಡಲ್ಪಟ್ಟಿದ್ದರು ಮತ್ತು ಇದರಿಂದಾಗಿ ಅವರಿಗೆ ನೆರವಿಗಾಗಿ ಕರೆ ಮಾಡುವುದೂ ಕಷ್ಟವಾಗಿತ್ತು. ಸರಣಿ ಕೋವಿಡ್-19 ಲಾಕ್‌ಡೌನ್‌ಗಳು ಕೌಟುಂಬಿಕ ಹಿಂಸಾಚಾರ ಪ್ರಕರಣಗಳನ್ನು ವರದಿ ಮಾಡುವ ಅವಕಾಶಗಳನ್ನು ತಗ್ಗಿಸಿತ್ತು ಎಂದರು.

ಲಾಕ್‌ಡೌನ್ ಸ್ಥಿತಿಯಿಂದಾಗಿ ಹಿಂಸಾಚಾರ ಮತ್ತು ಕಿರುಕುಳ ಸಂದರ್ಭಗಳಲ್ಲಿ ಸುರಕ್ಷಿತ ಸ್ಥಳಕ್ಕೆ ತೆರಳಲು ಸಾಧ್ಯವಾಗದೆ ಮಹಿಳೆಯರು ಅಸಹಾಯಕರಾಗಿದ್ದರು. ಲಾಕ್‌ಡೌನ್ ಸಂತ್ರಸ್ತ ಮಹಿಳೆಗೆ ತನ್ನ ಗೋಳನ್ನು ಮೊದಲು ತೋಡಿಕೊಳ್ಳುವ ತವರುಮನೆಯೊಂದಿಗಿನ ಸಂಪರ್ಕವನ್ನೂ ಕಡಿಮೆಗೊಳಿಸಿತ್ತು ಎಂದ ಅವರು, ಲಾಕ್‌ಡೌನ್ ಸಂದರ್ಭದಲ್ಲಿ ಹೆಚ್ಚುತ್ತಿರುವ ಕೌಟುಂಬಿಕ ಹಿಂಸೆ ಪ್ರಕರಣಗಳನ್ನು ನಿಭಾಯಿಸಲು ಆಯೋಗವು ತುರ್ತು ಸ್ಪಂದನಕ್ಕಾಗಿ ಹೊಸ ವಾಟ್ಸ್‌ಆ್ಯಪ್ ಸಹಾಯವಾಣಿಯನ್ನೂ ಆರಂಭಿಸಿತ್ತು ಎಂದರು.

2020ರಲ್ಲಿ ಶಿಕ್ಷಣವು ದೇಶದ ಮಕ್ಕಳ ಮುಖ್ಯ ಸಮಸ್ಯೆಯಾಗಿತ್ತು ಎಂದು ತಿಳಿಸಿದ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ (ಎನ್‌ಸಿಪಿಸಿಆರ್) ಪ್ರಿಯಾಂಕ್ ಕನುಂಗೊ, ‘ನಮ್ಮ ಮಕ್ಕಳಿಗೆ ಆನ್‌ಲೈನ್ ಶಿಕ್ಷಣ ನೀಡುವುದು ನಮ್ಮ ರೂಢಿಯಾಗಿರಲಿಲ್ಲ,ಆದರೆ ಕೋವಿಡ್-19 ನಮಗೆ ಸವಾಲನ್ನೊಡ್ಡಿತ್ತು. ಆದರೆ ವಿವಿಧ ಮಾರ್ಗಗಳ ಮೂಲಕ ನಾವು ಅದನ್ನು ಎದುರಿಸಿದ್ದು, ಈಗ ಸ್ಥಿತಿಯು ಸುಧಾರಿಸುತ್ತಿದೆ. ಅದು ಖಾಸಗಿಯಾಗಿರಲಿ ಅಥವಾ ಸರಕಾರಿಯಾಗಲಿ,ವಿದ್ಯಾರ್ಥಿಗಳು ತಮ್ಮ ಶಾಲೆಗಳೊಂದಿಗೆ ಸಂಪರ್ಕದಲ್ಲಿರುವಂತೆ ನೋಡಿಕೊಳ್ಳುವಲ್ಲಿ ನಾವು ಯಶಸ್ವಿಯಾಗಿದ್ದೇವೆ ’ ಎಂದು ತಿಳಿಸಿದರು.

ಕೊರೋನ ವೈರಸ್ ಸಾಂಕ್ರಾಮಿಕದಿಂದಾಗಿ ಶಾಲೆಗಳನ್ನು ತೊರೆಯುವ ಮಕ್ಕಳ ಸಂಖ್ಯೆ ಹೆಚ್ಚಬಹುದು ಎಂಬ ಕಳವಳಗಳ ಕುರಿತಂತೆ ಕನುಂಗೊ,ಶಾಲೆಗಳು ಪುನರಾರಂಭಗೊಳ್ಳುವ ಮೊದಲೇ ಇಂತಹ ಆತಂಕ ಸರಿಯಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News