ಮತಾಂತರ ವಿರೋಧಿ ಕಾಯ್ದೆ: ಉತ್ತರಪ್ರದೇಶವನ್ನು ತ್ಯಜಿಸುತ್ತಿರುವ ಅನ್ಯಧರ್ಮೀಯ ಜೋಡಿಗಳು

Update: 2020-12-27 10:43 GMT

ಬರೇಲಿ,ಡಿ.27: ಉತ್ತರಪ್ರದೇಶದಲ್ಲಿ ಬಲವಂತದ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದ ಬಳಿಕ ಒಂದು ತಿಂಗಳಿನಲ್ಲಿ 35ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ಹಲವು ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹಲವು ಜೋಡಿಗಳನ್ನು ಬಲವಂತವಾಗಿ ಬೇರ್ಪಡಿಸಿ ಬಂಧನಕ್ಕೊಳಪಡಿಸಲಾಗಿದೆ. ಇದೀಗ ಈ ಕಾಯ್ದೆಯ ಮೇಲಿನ ಭಯದಿಂದ ಹಲವಾರು ಅನ್ಯಧರ್ಮೀಯ ಜೋಡಿಗಳು ಉತ್ತರಪ್ರದೇಶದಿಂದ ಬೇರೆ ರಾಜ್ಯಗಳಿಗೆ ತೆರಳುತ್ತಿದ್ದಾರೆ ಎಂದು timesofindia.com ವರದಿ ಮಾಡಿದೆ.

“ನಾನು ಇಕ್ಬಾಲ್ ನನ್ನು ಪ್ರೀತಿಸುತ್ತಿದ್ದೇನೆ ಎಂದು ನನ್ನ ಮನೆಯಲ್ಲಿ ತಿಳಿದ ಕೂಡಲೇ ನನ್ನನ್ನು ಮನೆಯೊಳಗೆ ಕೂಡಿಹಾಕಿದರು. ಅಲ್ಗಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿದರು. ನನಗೆ ಆತ ಹಿಪ್ನಾಟಿಸಂ ಮಾಡಿದ್ದಾನೆಯೇ ಎಂದು ತಿಳಿಯಲು ಮನಶಾಸ್ತ್ರಜ್ಞರ ಬಳಿಯೂ ಕರೆದೊಯ್ದರು. ಹಲವಾರು ರೀತಿಯಲ್ಲಿ ಕಿರುಕುಳ ನೀಡಿದರು. ಕೊನೆಗೆ ನಾವಿಬ್ಬರೂ ಅಲ್ಲಿಂದ ದಿಲ್ಲಿಗೆ ಬಂದು ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದೇವೆ. ಮುಂದೇನಾಗಬಹುದು ಎಂದು ನಮಗೆ ತಿಳಿದಿಲ್ಲ” ಎಂದು ಸ್ಮೃತಿ ಎಂಬಾಕೆ ಹೇಳಿಕೆ ನೀಡಿದ್ದಾಗಿ timesofindia.com ವರದಿ ಮಾಡಿದೆ.

ಮುಹಮ್ಮದ್ ಶದಾಬ್ ಮತ್ತು ಅನಾಮಿಕ ಕಾಲೇಜಿನಲ್ಲಿ ಭೇಟಿಯಾದ ಬಳಿಕ ಪ್ರೀತಿಸಲು ಪ್ರಾರಂಭಿಸಿದ್ದರು. ಈ ವಿಚಾರವನ್ನು ತಿಳಿದ ಕೆಲ ಬಲಪಂಥೀಯ ಸಂಘಟನೆಗಳು ನಮ್ಮನ್ನುಕೊಲ್ಲುವವರೆಗೂ ಬಂದಿದ್ದವು ಎಂದು ಯುವಕ ಹೇಳುತ್ತಾನೆ. “ಅವರು ನನ್ನ ಹೆತ್ತವರಿಗೆ ತೊಂದರೆ ಕೊಡಬಹುದೆಂಬ ಭಯ ನನಗಿತ್ತು. ನಾನು ಎಲ್ಲವನ್ನೂ ನಿಲ್ಲಿಸುತ್ತೇನೆ ಎಂದು ಆ ಸಂಘಟನೆಗಳಿಗೆ ಮಾತು ನೀಡಿದ್ದೆ. ಆದರೆ ನಾವಿಬ್ಬರು ಸಂಪರ್ಕದಲ್ಲೇ ಇದ್ದೆವು. ನಮ್ಮ ರಾಜ್ಯದಲ್ಲಿ ಈ ಕಾನೂನು ಜಾರಿಯಾದ ಬಳಿಕ ತೊಂದರೆಗಳು ಹೆಚ್ಚುವುದು ಬೇಡ ಎಂದು ನಾವು ಪರಾರಿಯಾಗಿದ್ದೇವೆ. ಅವಶ್ಯಕತೆ ಬಂದರೆ ನಾನು ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲೂ ಸಿದ್ಧನಿದ್ದೇನೆ ನಮಗೆ ಧರ್ಮ ಒಂದು ಪ್ರಶ್ನೆಯೇ ಅಲ್ಲ ಎಂದು ಶದಾಬ್ ಹೇಳಿದ್ದಾಗಿ ವರದಿ ತಿಳಿಸಿದೆ.

ಈ ರೀತಿ ವಿಭಿನ್ನ ಧರ್ಮಗಳಿಗೆ ಸೇರಿದ ಜೋಡಿಗಳು ಈ ನಿಯಮದಿಂದ ಕಂಗಾಲಾಗಿದ್ದಾರೆ. ಹಲವಾರು ಮಂದಿ ಜೈಲಿನಲ್ಲಿದ್ದಾರೆ. ಜೊತೆಗೆ ನಡೆದ ಕಾರಣದಿಂದಾಗಿ ಬಂಧನಕ್ಕೊಳಪಟ್ಟು ಜೈಲು ಸೇರಿದವರೂ ಇದ್ದಾರೆ. ಹಾಗಾಗಿ ಸದ್ಯ ಉತ್ತರಪ್ರದೇಶ ಬಿಡುವವರ ಸಂಖ್ಯೆ ಹೆಚ್ಚಾಗಿದೆ ಎಂಧು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News