ಕುವೆಂಪು ಪ್ರಜ್ಞೆಯನ್ನು ಹೆಚ್ಚಿಸುವಂತಹ ಲೇಖನ

Update: 2020-12-30 18:03 GMT

ಮಾನ್ಯರೇ,

‘ವಾರ್ತಾಭಾರತಿ’ಯಲ್ಲಿ ಪ್ರಕಟವಾಗಿರುವ ‘ಕುವೆಂಪು ಕೃತಿಗಳ ದೋಣಿಯಲ್ಲಿ...’ ಎಂಬ ನಟರಾಜ್ ಹುಳಿಯಾರ್ ಬರೆದಿರುವ ಲೇಖನವನ್ನು ಓದಿದೆ. ಲೇಖನದ ಶೀರ್ಷಿಕೆ ಆಕರ್ಷಕ ಹಾಗೂ ಅರ್ಥಗರ್ಭಿತವಾಗಿದೆ. ಲೇಖನ ಕುವೆಂಪು ಜನ್ಮದಿನದಂದು, ಕುವೆಂಪು ಅವರ ಬರಹ ಹಾಗೂ ವ್ಯಕ್ತಿತ್ವದ ಮೇಲೆ ಬೆಳಕುಚೆಲ್ಲಿದ್ದು, ಕನ್ನಡ ಸಾಹಿತ್ಯ ಹಾಗೂ ಕನ್ನಡ ನಾಡಿನ ಸಾಮಾಜಿಕ ಜೀವನದ ಮೇಲಿನ ಇನ್ನೂ ಮುಂದುವರಿದಿರುವ ಅವರ ಪ್ರಭಾವದ ಬಗ್ಗೆಯೂ ಚರ್ಚಿಸಿದೆ.

ಪ್ರಸ್ತುತ ಲೇಖನ ಕುವೆಂಪು ಅವರ ವೈಚಾರಿಕತೆ ಹಾಗೂ ಬರವಣಿಗೆಯಲ್ಲಿನ ಕಲಾಪ್ರಜ್ಞೆ ಮತ್ತು ಸೌಂದರ್ಯ ತತ್ವಗಳ ವಿಶಿಷ್ಟತೆಯ ಮೇಲೆ ಬೆಳಕು ಚೆಲ್ಲಿದೆ. ಕುವೆಂಪು ಅವರ ನವ ಪದಗಳ ಸೃಷ್ಟಿಯ ಇಲ್ಲಿನ ವಿಶ್ಲೇಷಣೆ, ಅವರಲ್ಲಿನ ತತ್ವಜ್ಞಾನಿಯನ್ನು ಗುರುತಿಸುವ ಇಲ್ಲಿನ ಪ್ರಯತ್ನ ಆಸಕ್ತಿದಾಯಕವಾಗಿದೆ. ಲೇಖನದಲ್ಲಿನ ವಿಮರ್ಶಾತ್ಮಕ ವಿಶ್ಲೇಷಣೆ; ಅವರ ಕಾವ್ಯ, ಕಾದಂಬರಿ ಹಾಗೂ ನಾಟಕಗಳ ಬರವಣಿಗೆಯ ಹಿನ್ನೆಲೆ ಮತ್ತು ಅವರ ಬರಹ ಹಾಗೂ ಜೀವನದ ವಿವಿಧ ಮುಖಗಳ ಪರಿಚಯ- ಇವೆಲ್ಲ ಸಾಹಿತ್ಯಾಭಿಮಾನಿಗಳಲ್ಲಿ ಕುವೆಂಪು ಸಾಹಿತ್ಯದ ಹೆಚ್ಚಿನ ಓದಿಗೆ ಪ್ರೇರಣೆ ನೀಡುವಂತಿವೆ. ವಿವಿಧ ಪ್ರಕಾರಗಳಲ್ಲಿನ ಕುವೆಂಪು ಅವರ ಬರವಣಿಗೆಗೆ ಕಾರಣಗಳನ್ನು ಕೂಡ ವಿಮರ್ಶಿಸಿರುವ ಲೇಖನ, ಅವರ ಜೀವನ ಶೈಲಿಯ ಬಗೆಗೂ ಬೆಳಕು ಚೆಲ್ಲಿದೆ. ಜವಾಬ್ದಾರಿಯುತ ನಾಗರಿಕನಾಗಿ, ಸಾಹಿತಿಯಾಗಿ, ಅಧ್ಯಾಪಕನಾಗಿ, ಕನ್ನಡದ ಹೆಮ್ಮೆಯ ಕಂದನಾಗಿ ಕುವೆಂಪು ಬಾಳಿಬದುಕಿದ ಬಗೆಯನ್ನು ಲೇಖನ ಆಪ್ತವಾಗಿ ಕಟ್ಟಿಕೊಟ್ಟಿದೆ.

ನಾಡಿನ ವಿವಿಧ ಸಾಂಸ್ಕೃತಿಕ ಮೂಲಗಳನ್ನು ಕುವೆಂಪು ಅವರು ಇಂದಿಗೂ ಮುಂದುಮುಂದಕ್ಕೆ ಕೊಂಡೊಯ್ಯುತ್ತಿರುವ ಬಗೆಯನ್ನು ಹಾಗೂ ಅದೇ ಸಂದರ್ಭದಲ್ಲಿ ಈ ಸಾಂಸ್ಕೃತಿಕ ಮೂಲಗಳು ಕುವೆಂಪು ಅವರನ್ನೂ ಮುಂದುಮುಂದಕ್ಕೆ ಒಯ್ಯುತ್ತಿರುವ ಬಗೆಯನ್ನೂ ಲೇಖನ ಸ್ಮರಿಸಿದೆ. ಜೊತೆಜೊತೆಗೆ ಕುವೆಂಪು ಅವರ ಬೃಹತ್ ಬರಹಗಳನ್ನು ಮುದ್ರಣ ರೂಪದಲ್ಲಿ ಲಭ್ಯವಾಗಿಸಿರುವ ಸಂಪಾದಕರನ್ನು ಹಾಗೂ ಇದಕ್ಕಾಗಿ ಶ್ರಮಿಸಿರುವ ಎಲ್ಲರನ್ನೂ ಲೇಖನ ಸ್ಮರಿಸಿರುವುದೂ ಅರ್ಥಪೂರ್ಣವಾಗಿದೆ. ಕುವೆಂಪು ಸಮಗ್ರ ಸಾಹಿತ್ಯದ 12 ಸಂಪುಟಗಳನ್ನು ಕಳೆದ ನವೆಂಬರ್‌ನಲ್ಲಿ ತರಿಸಿಕೊಂಡಿದ್ದ ನನಗೆ ಅದನ್ನು ಹೇಗೆ ಎಲ್ಲಿಂದ ಓದಬೇಕೆಂಬ ಜಿಜ್ಞಾಸೆ ಇತ್ತು. ಈಗ ನನಗೆ ನಟರಾಜ್ ಹುಳಿಯಾರ್‌ರ ಈ ಲೇಖನ ಕುವೆಂಪು ಓದಿನ ದಾರಿದೀಪಗಳಂತಿದೆೆ. ಅದೇ ರೀತಿ ನಾಡಿನ ಹೊಸ ಓದುಗರಲ್ಲೂ ಈ ಲೇಖನ ಕುವೆಂಪು ಓದಿನ ಕಿಚ್ಚನ್ನು ಮೂಡಿಸಬಲ್ಲದು ಎಂಬ ಭಾವನೆ ಮತ್ತು ನಂಬಿಕೆ ನನ್ನದು. ನಮ್ಮಲ್ಲಿನ ಕುವೆಂಪು ಪ್ರಜ್ಞೆಯನ್ನು ಹೆಚ್ಚಿಸುವಂತಹ ಲೇಖನಗಳನ್ನು ನೀಡಿರುವುದಕ್ಕಾಗಿ ಹೃತ್ಪೂರ್ವಕವಾದ ಧನ್ಯವಾದಗಳು.

Writer - -ಮೋಹನ್, ಮಿರ್ಲೆ

contributor

Editor - -ಮೋಹನ್, ಮಿರ್ಲೆ

contributor

Similar News