ಗಂಡನ ಮನೆಯಲ್ಲಿ ವ್ಯಂಗ್ಯ, ಚುಚ್ಚುಮಾತು ವೈವಾಹಿಕ ಜೀವನದ ಭಾಗ: ನ್ಯಾಯಾಲಯ
ಮುಂಬೈ : ವಿವಾಹಿತ ಮಹಿಳೆಗೆ ಗಂಡನ ಮನೆಯವರಿಂದ ವ್ಯಂಗ್ಯ, ಚುಚ್ಚುಮಾತುಗಳು ಬರುವುದು ಸಹಜ; ಇದು ವೈವಾಹಿಕ ಜೀವನದ ಅಂಗ; ಪ್ರತಿಯೊಂದು ಕುಟುಂಬವೂ ಇದನ್ನು ಅನುಭವಿಸುತ್ತದೆ ಎಂದು ಸೆಷನ್ಸ್ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ತನಗೆ ಹಿಂಸೆ ಮತ್ತು ಕಿರುಕುಳ ನೀಡಲಾಗುತ್ತಿದೆ ಎಂದು ಆಪಾದಿಸಿ ಬೇರ್ಪಟ್ಟ ಸೊಸೆ, 80 ಮತ್ತು 75 ವರ್ಷದ ಮಾವ- ಅತ್ತೆ ವಿರುದ್ಧ ನೀಡಿದ ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯ ವೃದ್ಧ ದಂಪತಿಗೆ ನಿರೀಕ್ಷಣಾ ಜಾಮೀನು ನೀಡಿದೆ. ಅತ್ತೆ ಮತ್ತು ಮಾವ ಸಾಗರದಾಚೆ ಇರುವವರ ಪಟ್ಟಿಯಲ್ಲಿರುವುದರಿಂದ ಅವರ ಮನವಿಯನ್ನು ತಿರಸ್ಕರಿಸಬೇಕು ಎಂಬ ಮಹಿಳೆಯ ವಾದವನ್ನು ನ್ಯಾಯಾಲಯ ಅಲ್ಲಗಳೆದಿದೆ.
ಅಂತರರಾಷ್ಟ್ರೀಯ ತನಿಖಾ ಪತ್ರಕರ್ತರ ಒಕ್ಕೂಟ (ಐಸಿಐಜೆ) ಬಿಡುಗಡೆ ಮಾಡಿದ ಪಟ್ಟಿಯ ಪ್ರಕಾರ ಮಹಿಳೆಯ ಅತ್ತೆ ಮಾವ ಸಾಗರದಾಚೆಗಿನವರು (ಆಫ್‌ಶೋರ್ ಎಂಟಿಟೀಸ್). ಆದರೆ ಇದು ಸ್ವತಂತ್ರ ಪ್ರಕರಣ. "ಅರ್ಜಿದಾರರ ವಿರುದ್ಧ ಐಸಿಐಜೆ ಅಡಿಯಲ್ಲಿ ವಿಚಾರಣೆ ಬಾಕಿ ಇದ್ದರೂ, ನಿರೀಕ್ಷಣಾ ಜಾಮೀನು ಅರ್ಜಿಯನ್ನು ನಿರ್ಧರಿಸುವುದಕ್ಕೂ ಅದಕ್ಕೂ ಸಂಬಂಧವಿಲ್ಲ. ಅರ್ಜಿದಾರರ ವಿರುದ್ಧ ಯಾವುದೇ ಅಪರಾಧ ಪ್ರಕರಣಗಳು ದಾಖಲಾಗಿಲ್ಲ. ಆದ್ದರಿಂದ ಈ ಹಂತದಲ್ಲಿ ಅದರ ಪ್ರಕ್ರಿಯೆ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
"ವಿವಾಹಕ್ಕೆ ಕೆಲವೇ ದಿನ ಮೊದಲು ಭಾವಿ ಪತಿ, ಮನೆಕೆಲಸದಾಕೆಯ ಪುತ್ರ ಎನ್ನುವುದು ನಮ್ಮ ಕುಟುಂಬಕ್ಕೆ ತಿಳಿಯಿತು" ಎಂದು 30 ವರ್ಷದ ಮಹಿಳೆ ಅರ್ಜಿಯಲ್ಲಿ ಹೇಳಿದ್ದರು. ತಾನು ಫ್ರಿಡ್ಜ್ ಮುಟ್ಟಲು ಕೂಡಾ ಅವಕಾಶ ನೀಡದೇ ಕೆಟ್ಟ ಆಹಾರ ನೀಡಿ ಲಿವಿಂಗ್ ರೂಂನಲ್ಲೇ ನಿದ್ರಿಸುವಂತೆ ಮಾಡಲಾಗಿತ್ತು ಎಂದು ಮಹಿಳೆ ಆಪಾದಿಸಿದ್ದರು.