ಚುನಾಯಿತ ಪ್ರತಿನಿಧಿಗಳು ಲಸಿಕೆ ಪಡೆದು ಮೇಲ್ಪಂಕ್ತಿಯಾಗಲಿ

Update: 2021-01-06 17:47 GMT

ಮಾನ್ಯರೇ,
ನಮ್ಮ ದೇಶದ ಎಲ್ಲಾ ಹಂತದ ಚುನಾಯಿತ ಪ್ರತಿನಿಧಿಗಳು ಸರಕಾರದ ಹಣದಿಂದ ನಾಗರಿಕರಿಗೆ ತಲುಪಿಸಲು ಸಿದ್ಧವಾಗುವ ಎಲ್ಲ ಕಾಮಗಾರಿಗಳಿಗೆ ತಾವೇ ಮುಂದೆ ನಿಂತು ಶಂಕುಸ್ಥಾಪನೆ, ಅದಕ್ಕೊಂದು ಕಲ್ಲು, ನಂತರ ಉದ್ಘಾಟನೆಗೊಂದು ಕಲ್ಲು, ಮತ್ತೆ ಕೆಲವು ಕಾಮಗಾರಿಗಳಿಗೆ ಹಂತ ಹಂತದ ಯೋಜನೆಗಳಿಗೊಂದೊಂದು ಅಡಿಗಲ್ಲು, ಅದರಲ್ಲಿ ಇವರ ಹೆಸರುಗಳನ್ನು ಬಯಸುತ್ತಾರೆ. ಈಗ ದೇಶದಲ್ಲಿ ಕೋವಿಡ್-19 ಮಹಾಮಾರಿಯ ವಿರುದ್ಧ ನಮ್ಮ ದೇಶದ ಹೆಮ್ಮೆಯ ವಿಜ್ಞಾನಿಗಳು ಸಿದ್ಧಪಡಿಸಿರುವ ಸ್ವದೇಶಿ ನಿರ್ಮಿತ ಲಸಿಕೆಯನ್ನು ಪಂಚಾಯತ್‌ನಿಂದ ಹಿಡಿದು ಪ್ರಧಾನಮಂತ್ರಿ ತನಕ ಎಲ್ಲಾ ಚುನಾಯಿತ ಪ್ರತಿನಿಧಿಗಳು ನಾಗರಿಕರಿಗೆ ನೀಡುವ ಮೊದಲು ತಾವೇ ಲಸಿಕೆಯನ್ನು ಪಡೆದುಕೊಂಡು ಇದನ್ನು ಸಹ ಉದ್ಘಾಟಿಸಿ ಮೇಲ್ಪಂಕ್ತಿಯನ್ನು ಹಾಕಿಕೊಡಲಿ. ಇದರಿಂದ ದೇಶದ ನಾಗರಿಕರಿಗೆ ಲಸಿಕೆಯ ಬಗ್ಗೆ ಇರಬಹುದಾದಂತಹ ಎಲ್ಲ ಅನುಮಾನಗಳು ಪರಿಹಾರವಾಗುತ್ತವೆ.
ಅಮೆರಿಕದಲ್ಲಿ ಅಲ್ಲಿನ ಭಾವೀ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಲಸಿಕೆಯನ್ನು ಪಡೆದು ಅಮೆರಿಕದ ನಾಗರಿಕರಿಗೆ ವಿಶ್ವಾಸವನ್ನು ತುಂಬಿದರು. ಅದೇ ರೀತಿಯಲ್ಲಿ ಬ್ರಿಟನ್‌ನ ರಾಣಿ ಲಸಿಕೆಯನ್ನು ಪಡೆದು ಮಾದರಿಯಾದರು. ನಮ್ಮ ದೇಶದಲ್ಲಿ ಎಲ್ಲದಕ್ಕೂ ಮುಂದೆ ನಿಂತು ಮಾಧ್ಯಮಗಳಲ್ಲಿ ತಮ್ಮ ಮುಖವನ್ನು ಕಾಣಿಸಿಕೊಳ್ಳಲು ಬಯಸುವಂತಹ ಚುನಾಯಿತ ಪ್ರತಿನಿಧಿಗಳು ಲಸಿಕೆ ವಿಚಾರದಲ್ಲೂ ಮುಂದೆ ನಿಂತು ಲಸಿಕೆಯನ್ನು ಪಡೆದು ಮಾದರಿಯಾಗಲಿ. ಇದೇ ಸಂದರ್ಭದಲ್ಲಿ ಲಸಿಕೆಯನ್ನು ಸಿದ್ಧಪಡಿಸಲು ನೇತೃತ್ವವನ್ನು ವಹಿಸಿಕೊಂಡಿರುವ ನಮ್ಮ ದೇಶದ ಹೆಮ್ಮೆಯ ಸಂಶೋಧಕರ ಹೆಸರುಗಳನ್ನು ಮಾಧ್ಯಮದಲ್ಲಿ ಪ್ರಕಟಿಸಿ. ನಮ್ಮ ದೇಶದ ಜನರು ಕೃತಜ್ಞತೆಯನ್ನು ಅರ್ಪಿಸಬೇಕಾಗಿರುವುದು ಅವರಿಗೆ. ಯಾರದೋ ಶ್ರಮವನ್ನು ಇನ್ಯಾರೋ ಪ್ರಚಾರ ಪಡೆದುಕೊಳ್ಳುವುದು ಬೇಡ.
 

Similar News