ಕರ್ನಾಟಕದಿಂದ ಅಕ್ಕಿ ಖರೀದಿಗೆ ರಿಲಯನ್ಸ್‌ ಒಪ್ಪಂದ: ನೋಂದಣಿ ಮಾಡಿಕೊಂಡ 1100 ರೈತರು

Update: 2021-01-10 10:12 GMT

ರಾಯಚೂರು,ಜ.10: ಕರ್ನಾಟಕದಲ್ಲಿ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದ ಬಳಿಕ ಮೊದಲ ಬಾರಿಗೆ ರಿಲಯನ್ಸ್ ರೀಟೈಲ್ ಲಿಮಿಟೆಡ್, ಸಿಂಧನೂರು ತಾಲೂಕಿನ ರೈತರಿಂದ 1000 ಕ್ವಿಂಟಲ್ ಸೋನಾ ಮಸೂರಿ ಭತ್ತವನ್ನು ಖರೀದಿ ಮಾಡಿಕೊಳ್ಳಲು ಒಪ್ಪಂದ ಮಾಡಿಕೊಂಡಿದೆ.

ರಿಲಯನ್ಸ್‍ನೊಂದಿಗೆ ಜೋಡಿಸಿಕೊಂಡಿರುವ ಏಜೆಂಟರು ಹದಿನೈದು ದಿನಗಳ ಹಿಂದೆ ಸ್ವಾಸ್ಥ್ಯ ಫಾರ್ಮಸ್ಸ್ ಪ್ರೊಡ್ಯೂಸಿಂಗ್ ಕಂಪನಿ (ಎಸ್‍ಎಫ್‍ಪಿಸಿ) ಜತೆ ಒಪ್ಪಂದ ಮಾಡಿಕೊಂಡಿದ್ದಾರೆ. ಪ್ರಾಥಮಿಕವಾಗಿ ಖಾದ್ಯ ತೈಲ ವಹಿವಾಟು ನಡೆಸುವ ಎಸ್‍ಎಫ್‍ಪಿಸಿ ಇದೀಗ ಭತ್ತದ ಖರೀದಿ ಹಾಗೂ ಮಾರಾಟಕ್ಕೆ ಕೈಹಾಕಿದೆ. ಸುಮಾರು 1100 ರೈತರು ಇದರ ಜತೆ ಒಪ್ಪಂದ ಮಾಡಿಕೊಂಡಿದ್ದಾರೆ. ರೈತರು ಬೆಳೆದ ಉತ್ಪನ್ನ ಶೇಕಡ 16ಕ್ಕಿಂತ ಕಡಿಮೆ ತೇವಾಂಶ ಹೊಂದಿರಬೇಕು ಎಂಬ ಷರತ್ತು ವಿಧಿಸಲಾಗಿದೆ. 

ಪ್ರತಿ ಕ್ವಿಂಟಲ್ ಸೋನಾ ಮಸೂರಿ ಅಕ್ಕಿಗೆ 1950 ರೂಪಾಯಿ ಬೆಲೆ ನಿಗದಿಪಡಿಸಲಾಗಿದ್ದು, ಇದು ಸರ್ಕಾರ ನಿಗದಿಪಡಿಸಿರುವ ಕನಿಷ್ಠ ಬೆಂಬಲ ಬೆಲೆ (ರೂ. 1868)ಗಿಂತ 82 ರೂಪಾಯಿ ಅಧಿಕ.

ಎಸ್‍ಎಫ್‍ಪಿಸಿ ಮತ್ತು ರೈತರ ನಡುವಿನ ಒಡಂಬಡಿಕೆ ಅನ್ವಯ ಪ್ರತಿ 100 ರೂಪಾಯಿ ವಹಿವಾಟಿಗೆ 1.5% ಕಮಿಷನ್ ನೀಡಬೇಕಾಗುತ್ತದೆ. ಭತ್ತ ಪ್ಯಾಕ್ ಮಾಡಲು ಬಳಸುವ ಚೀಲದ ವೆಚ್ಚವನ್ನು ಮತ್ತು ಸಿಂಧನೂರಿನಲ್ಲಿರುವ ಉಗ್ರಾಣಕ್ಕೆ ಸಾಗಾಣಿಕೆ ಮಾಡುವ ವೆಚ್ಚವನ್ನು ರೈತರು ಭರಿಸಬೇಕಾಗುತ್ತದೆ.

ಉಗ್ರಾಣದಲ್ಲಿ ದಾಸ್ತಾನು ಮಾಡಲಾಗುವ ಭತ್ತದ ಗುಣಮಟ್ಟವನ್ನು ಮೂರನೇ ಸಂಸ್ಥೆ ಪರೀಕ್ಷಿಸಲಿದೆ ಎಂದು ಎಸ್‍ಎಫ್‍ಪಿಸಿ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ವಳಕಲ್‍ದಿನ್ನಿ ಹೇಳಿದ್ದಾರೆ. ಗುಣಮಟ್ಟ ತೃಪ್ತಿಕರವಾಗಿದೆ ಎನ್ನುವುದು ಕಂಡುಬಂದ ಬಳಿಕ, ರಿಲಯನ್ಸ್ ಏಜೆಂಟರು ಬೆಳೆ ಖರೀದಿಸಲಿದ್ದಾರೆ. ಪ್ರಸ್ತುತ 500 ಕ್ವಿಂಟಲ್ ಭತ್ತ ದಾಸ್ತಾನು ಇದೆ. ಯಾವುದೇ ಕ್ಷಣದಲ್ಲಿ ರಿಲಯನ್ಸ್ ಇದನ್ನು ಖರೀದಿಸುವ ಸಾಧ್ಯತೆ ಇದೆ. ಇದನ್ನು ಖರೀದಿಸಿದ ತಕ್ಷಣ ಹಣವನ್ನು ರಿಲಯನ್ಸ್ ಆನ್‍ಲೈನ್ ಮೂಲಕ ಪಾವತಿಸಲಿದೆ. ಅದನ್ನು ನೇರವಾಗಿ ರೈತರಿಗೆ ಪಾವತಿಸಲಾಗುತ್ತದೆ ಎಂದು ವಿವರ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News