ರೈತರ ಪ್ರತಿಭಟನೆಯಲ್ಲಿ 'ಮಾವೋವಾದಿಗಳ ಪಾತ್ರವಿಲ್ಲ' ಎಂದ ಗೃಹ ಇಲಾಖೆ: ಕೇಂದ್ರ ಸಚಿವ ಪಿಯೂಷ್‌ ಗೋಯಲ್‌ ಗೆ ಮುಖಭಂಗ

Update: 2021-01-10 10:46 GMT

ಹೊಸದಿಲ್ಲಿ,ಜ.10: ಕೇಂದ್ರ ಸರಕಾರದ ನೂತನ ಕೃಷಿ ಕಾಯ್ದೆಯನ್ನು ವಿರೋಧಿಸಿ ರಾಜಧಾನಿ ದಿಲ್ಲಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿರುವಂತೆಯೇ, "ಮಾವೋವಾದಿಗಳ ಬೆಂಬಲದಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ, ರೈತರ ಪ್ರತಿಭಟನೆಯಲ್ಲಿ ಮಾವೋವಾದಿಗಳ ಪಾತ್ರವಿದೆ ಎಂದು ಕೇಂದ್ರ ಸಚಿವ ಪಿಯೂಷ್‌ ಗೋಯಲ್‌ ಹೇಳಿಕೆ ನೀಡಿದ್ದರು. ಈ ಕುರಿತಾದಂತೆ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದ ಆರ್ಟಿಐ ಕಾರ್ಯಕರ್ತ ಸಾಕೇತ್‌ ಗೋಖಲೆಗೆ ʼಅಂತಹಾ ಯಾವುದೇ ದಾಖಲೆಗಳಿಲ್ಲʼ ಎಂದು ಗೃಹ ಸಚಿವಾಲಯ ಉತ್ತರ ನೀಡಿದೆ. 

ಈ ಕುರಿತು ಟ್ವಿಟರ್‌ ನಲ್ಲಿ ತಾವು ಸಲ್ಲಿಸಿದ್ದ ಅರ್ಜಿ ಮತ್ತು ಗೃಹ ಸಚಿವಾಲಯದ ಉತ್ತರದ ಪ್ರತಿಯನ್ನು ಲಗತ್ತಿಸಿದ್ದಾರೆ. "ಡಿಸೆಂಬರ್‌ ನಲ್ಲಿ ಪಿಯೂಶ್‌ ಗೋಯಲ್‌, ಸಿಂಘು ಬಾರ್ಡರ್‌ ನಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಮಾವೋವಾದಿಗಳು ನಿಯಂತ್ರಿಸುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಈ ಕುರಿತಾದಂತೆ ʼರೈತರ ಪ್ರತಿಭಟನೆಯಲ್ಲಿ ಮಾವೋವಾದಿಗಳ ಪಾತ್ರವಿದೆಯೇ ಎಂಬ ಪ್ರಶ್ನೆಯೊಂದಿಗೆ ನಾನು ಆರ್ಟಿಐ ಅರ್ಜಿ ಸಲ್ಲಿಸಿದ್ದೆ. ಈ ಪ್ರಶ್ನೆಗೆ ಉತ್ತರವೆಂಬಂತೆ 'ಯಾವುದೇ ದಾಖಲೆಗಳಿಲ್ಲʼ ಎಂದು ಗೃಹ ಸಚಿವಾಲಯವು ಸ್ಪಷ್ಟಪಡಿಸಿದೆ. ಸಾರ್ವಜನಿಕವಾಗಿ ಸುಳ್ಳು ಹೇಳಲು ಡಿಟೆಕ್ಟಿವ್‌ ಗೋಯಲ್‌ ಗೆ ನಾಚಿಕೆಯಾಗುವುದಿಲ್ಲವೇ ಎಂದು ಅವರು ಸಾಮಾಜಿಕ ತಾಣದಲ್ಲಿ ಪ್ರಶ್ನಿಸಿದ್ದಾರೆ.

ಸಾಖೇತ್‌ ಗೋಖಲೆ ಸಲ್ಲಿಸಿದ್ದ ಆರ್ಟಿಐ ಅರ್ಜಿಗೆ ಉತ್ತರವೆಂಬಂತೆ "ನೀವು ಅರ್ಜಿ ಸಲ್ಲಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳಿಲ್ಲ. ನಿಮ್ಮ ಅರ್ಜಿಯನ್ನು ಸಿಪಿಐಒ ನಿರ್ದೇಶಕರಿಗೆ ವರ್ಗಾವಣೆ ಮಾಡಿದ್ದೇವೆ. ಏನಾದರೂ ದಾಖಲೆಗಳಿದ್ದಲ್ಲಿ ಅವರು ನಿಮಗೆ ಮಾಹಿತಿ ನೀಡಬಹುದು" ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News