ಟಿಎಂಸಿಯಿಂದ ಸುವೇಂದು ಅಧಿಕಾರಿಯ ನಂದಿಗ್ರಾಮ ಕಚೇರಿ ಧ್ವಂಸ:ಬಿಜೆಪಿ ಆರೋಪ

Update: 2021-01-10 14:40 GMT

 ಪೂರ್ವ ಮಿಡ್ನಾಪುರ (ಪ.ಬಂ.),ಜ.10: ನಂದಿಗ್ರಾಮದಲ್ಲಿ ತನ್ನ ಮುಖಂಡ ಸುವೇಂದು ಅಧಿಕಾರಿಯವರ ಕಚೇರಿಯನ್ನು ಶನಿವಾರ ರಾತ್ರಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಾರ್ಯಕರ್ತರು ಧ್ವಂಸಗೊಳಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಘಟನೆಯ ಹಿಂದಿನ ರೂವಾರಿಗಳನ್ನು ಬಂಧಿಸುವಂತೆ ಅದು ಆಗ್ರಹಿಸಿದೆ.

‘ನಂದಿಗ್ರಾಮದಲ್ಲಿ ಟಿಎಂಸಿ ಕಾರ್ಯಕರ್ತರ ದಾಂಧಲೆಯನ್ನು ನಾವು ಪ್ರತಿಭಟಿಸುತ್ತೇವೆ. ಆಡಳಿತವು ತಮ್ಮ ಜೊತೆಯಲ್ಲಿರುವುದರಿಂದ ಅವರು ತಮ್ಮ ತೋಳ್ಬಲವನ್ನು ಬಳಸಿ ಇಂತಹ ಕೃತ್ಯಗಳನ್ನು ನಡೆಸುತ್ತಿದ್ದಾರೆ. ಘಟನೆಗೆ ಕಾರಣರಾದವರ ವಿರುದ್ಧ ಕ್ರಮಗಳನ್ನು ಕೈಗೊಂಡು ಅವರನ್ನು ಬಂಧಿಸದಿದ್ದರೆ ಭವಿಷ್ಯದಲ್ಲಿ ಸಂಭವಿಸುವ ಘಟನೆಗಳಿಗೆ ನೀವೇ ಹೊಣೆಯಾಗುತ್ತೀರಿ ಎಂದು ನಾವು ಆಡಳಿತಕ್ಕೆ ತಿಳಿಸಿದ್ದೇವೆ. ಇಂತಹ ಕೃತ್ಯಗಳ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ ’ ಎಂದು ಬಿಜೆಪಿ ನಾಯಕ ಕನಿಷ್ಕ ಪಾಂಡಾ ತಿಳಿಸಿದರು.

  ಆದರೆ,ಬಿಜೆಪಿಯ ಹಳೆಯ ಕಾರ್ಯಕರ್ತರು ಈ ಘಟನೆಗೆ ಹೊಣೆಗಾರರಾಗಿದ್ದಾರೆ ಎಂದು ತಿಳಿಸಿರುವ ಪೂರ್ವ ಮಿಡ್ನಾಪುರ ಜಿಲ್ಲಾ ಟಿಎಂಸಿ ಉಪಾಧ್ಯಕ್ಷ ಎಸ್.ಕೆ ಸೂಫಿಯಾನ್ ಅವರು,ಅವರು (ಬಿಜೆಪಿ) ಯಾವಾಗಲೂ ಸುಳ್ಳು ಹೇಳುತ್ತಾರೆ ಮತ್ತು ಅದು ಅವರ ಚಟವಾಗಿದೆ. ಅವರು ಟಿಎಂಸಿ ಧ್ವಜವನ್ನು ಹರಿದಿದ್ದಾರೆ ಮತ್ತು ಮಮತಾ ಬ್ಯಾನರ್ಜಿಯವರ ಚಿತ್ರವನ್ನು ಸುಟ್ಟುಹಾಕಿದ್ದಾರೆ. ಸಭೆಯಲ್ಲಿ ಉಪಸ್ಥಿತರಿದ್ದ ಹಳೆಯ ಬಿಜೆಪಿ ಕಾರ್ಯಕರ್ತರು ಅಧಿಕಾರಿಯವರ ಕಚೇರಿಯನ್ನು ಧ್ವಂಸಗೊಳಿಸಿದ್ದಾರೆ ಮತ್ತು ಟಿಎಂಸಿ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ. ಅವರು ಟಿಎಂಸಿಯನ್ನು ದೂರುವ ಬದಲು ತಮ್ಮ ಮನೆಯನ್ನು ಹದ್ದುಬಸ್ತಿನಲ್ಲಿಡಬೇಕು ಎಂದು ಹೇಳಿದರು.

ಟಿಎಂಸಿ ಸರಕಾರದಲ್ಲಿ ಸಚಿವರಾಗಿದ್ದ ಅಧಿಕಾರಿ ಇತ್ತೀಚಿಗೆ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News