ಗಣರಾಜ್ಯೋತ್ಸವದ ಅತಿಥಿಯಾಗಲಿರುವ ʼಸುರಿನಾಮ್‌ʼ ದೇಶದ ಅಧ್ಯಕ್ಷ ಚಂದ್ರಿಕಪ್ರಸಾದ್‌ ಚಾನ್‌ ಕುರಿತು ನಿಮಗೇನು ಗೊತ್ತು?

Update: 2021-01-11 07:57 GMT

ಹೊಸದಿಲ್ಲಿ,ಜ.11: ಭಾರತದ ಗಣರಾಜ್ಯೋತ್ಸವ ದಿನದಂದು ಅತಿಥಿಯಾಗಿ ಆಗಮಿಸಲಿದ್ದ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌, ಬ್ರಿಟನ್‌ ನಲ್ಲಿನ ರೂಪಾಂತರಿತ ವೈರಸ್‌ ಭೀತಿಯಿಂದಾಗಿ ತಮ್ಮ ಭೇಟಿಯನ್ನು ರದ್ದುಪಡಿಸಿದ್ದರು. ಅತಿಥಿಗಳಿಲ್ಲದೇ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯುವ ಕುರಿತು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದೀಗ ಗಣರಾಜ್ಯೋತ್ಸವದಂದು ಅತಿಥಿಯಾಗಿ ʼಸುರಿನಾಮ್‌ʼ ದೇಶದ ಅಧ್ಯಕ್ಷ ಚಂದ್ರಿಕಪ್ರಸಾದ್‌ ಚಾನ್‌ ಸಂಟೋಕಿ ಆಗಮಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ಸುರಿನಾಮ್‌ ದೇಶವು ದಕ್ಷಿಣ ಅಮೆರಿಕಾದಲ್ಲಿರುವ ಒಂದು ಸಣ್ಣ ದೇಶವಾಗಿದೆ. ಈ ಹಿಂದೆ ಅಲ್ಲಿ ಸರ್ವಾಧಿಕಾರಿ ಆಡಳಿತವು ನಡೆಯುತ್ತಿದ್ದು, ಚಂದ್ರಿಕಪ್ರಸಾದ್ ಚಾನ್‌ ಸಂಟೋಕಿ ಐತಿಹಾಸಿಕವಾಗಿ ಸರ್ವಾಧಿಕಾರವನ್ನು ಅಂತ್ಯಗೊಳಿಸಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಈ ಹಿಂದೆ ಸುರಿನಾಮ್‌ ನ ಪೊಲೀಸ್‌ ಮುಖ್ಯಸ್ಥರಾಗಿದ್ದ ಚಾನ್‌, ಮೇ ತಿಂಗಳಿನಲ್ಲಿ ಚುನಾವಣೆ ಗೆದ್ದು ಅಧ್ಯಕ್ಷ ಗಾದಿಗೇರಿದ್ದರು.

ಚಂದ್ರಿಕಪ್ರಸಾದ್‌ ಚಾನ್‌ ಸಂಟೋಕಿ ಯಾರು?

61ರ ಹರೆಯದ ಚಂದ್ರಿಕಪ್ರಸಾದ್‌ ಚಾನ್‌ ಸಂಟೋಕಿ ಈ ಹಿಂದೆ ಡಚ್‌ ವಸಾಹತು ಆಗಿದ್ದ ಸುರಿನಾಮ್‌ ದೇಶದ ಅಧ್ಯಕ್ಷರಾಗಿದ್ದಾರೆ. ಸುರಿನಾಮ್‌ ನಲ್ಲೇ ಹುಟ್ಟಿದ ಅವರು ನೆದರ್‌ ಲ್ಯಾಂಡ್‌ ನ ಪೊಲೀಸ್‌ ಅಕಾಡಮಿಯಲ್ಲಿ ವಿದ್ಯಾಭ್ಯಾಸ ಕೈಗೊಂಡರು. ಸುರಿನಾಮ್‌ ಗೆ ಹಿಂದಿರುಗಿದ ಬಳಿಕ ಪೊಲೀಸ್‌ ಇನ್‌ ಸ್ಪೆಕ್ಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಅವರು 1991ರಲ್ಲಿ ಪೊಲೀಸ್‌ ಮುಖ್ಯಸ್ಥರಾಗಿ ಆಯ್ಕೆಯಾದರು. 2005ರಿಂದ 2010ರವರೆಗೆ ನ್ಯಾಯಾಂಗ ಸಚಿವರಾಗಿ ಕಾರ್ಯ ನಿರ್ವಹಿಸಿದರು. 2010ರಲ್ಲಿ ಚುನಾವಣೆಗೆ ಸ್ಫರ್ಧಿಸಿದರಾದರೂ ಪ್ರತಿಸ್ಫರ್ಧಿ ಬೂಟ್ರೆಸ್‌ ವಿರುದ್ಧ ಗೆಲುವು ಸಾಧಿಸಲು ಸಾಧ್ಯವಾಗಿರಲಿಲ್ಲ.

2015ರ ಎರಡನೇ ಅವಧಿಯಲ್ಲೂ ಬೂಟ್ರೆಸ್‌ ಅಧಿಕಾರಕ್ಕೆ ಬಂದಿದ್ದು, ಆದರೆ ಮೂರನೇ ಅವಧಿಯ ಚುನಾವಣೆಯಲ್ಲಿ ಬೂಟ್ರೆಸ್‌ ಅಧಿಕಾರವು ಅಂತ್ಯಗೊಂಡು ಚಂದ್ರಿಕಪ್ರಸಾದ್‌ ಚಾನ್‌ ಅಧಿಕಾರಕ್ಕೆ ಬಂದರು. ಇವರ ಪ್ರೋಗ್ರೆಸಿವ್‌ ರಿಫಾರ್ಮ್‌ ಪಾರ್ಟಿಯು 51ರಲ್ಲಿ 20 ಸೀಟುಗಳನ್ನು ಜಯಿಸಿ ಜನರಲ್‌ ಲಿಬರೇಶನ್‌ ಆಂಡ್‌ ಡೆವೆಲೆಪ್ಮೆಂಟ್‌ ಪಾರ್ಟಿ ಜೊತೆ ಸೇರಿಕೊಂಡು ಸರಕಾರವನ್ನು ರಚಿಸಿದ್ದಾರೆ.

ಭಾರತೀಯ ಮೂಲದ ಸಂತೋಕಿಯು ತಾನು ಅಧಿಕಾರ ಸ್ವೀಕರಿಸುವ ವೇಳೆ ವೇದಗಳನ್ನು ಹಿಡಿದುಕೊಂಡು ಸಂಸ್ಕೃತ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು. "ನಾನು ಭಾರತೀಯ ಸಂಸ್ಕೃತಿಗೆ ಒಳಪಟ್ಟವನು ಎಂಬ ಹೆಮ್ಮೆ ನನ್ನಲ್ಲಿ ಸದಾ ಇರುತ್ತದೆ. ಈ ಸಂಸ್ಕೃತಿ, ಸಂಪ್ರದಾಯಗಳು ನನ್ನ ತಂದೆಗೆ ನನ್ನ ಮುತ್ತಜ್ಜರಿಂದ 148 ವರ್ಷಗಳ ಹಿಂದೆ ಬಳುವಳಿಯಾಗಿ ಬಂದದ್ದು" ಎಂದು 16ನೆ ಪ್ರವಾಸಿ ಭಾರತೀಯ ದಿವಸ್‌ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಸಂಟೋಕಿ ಹೇಳಿಕೆ ನೀಡಿದ್ದರು.

ಸದ್ಯ ಅವರು ಬೋರಿಸ್‌ ಜಾನ್ಸನ್‌ ಬದಲಿಗೆ ಗಣರಾಜ್ಯೋತ್ಸವಕ್ಕೆ ಅತಿಥಿಯಾಗಿ ಆಗಮಿಸಲಿದ್ದಾರೆ ಎಂಬ ಮಾತುಗಳು ಪ್ರಧಾನಿ ಕಚೇರಿಯ ಮೂಲಗಳಿಂದ ಕೇಳಿ ಬರುತ್ತಿದ್ದು, ಈ ಕುರಿತು ಇನ್ನೂ ಅಧಿಕೃತ ಹೇಳಿಕೆ ಹೊರ ಬಿದ್ದಿಲ್ಲ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News