ದುರಸ್ತಿಯಿಲ್ಲದೇ ಹಾಳಾಗಿದ್ದ ಶಾಲೆಗೆ ಸ್ವಂತ ಖರ್ಚಿನಿಂದ ಹೊಸ ರೂಪ ನೀಡಿದ ಅಧ್ಯಾಪಕಿ
ಚೆನ್ನೈ,ಜ.11: ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ದೆಂಕನಿಕೊಟ್ಟೈ ತಾಲೂಕಿನ ಕರುಕಕೊಲ್ಲೈ ಎಂಬಲ್ಲಿನ ಪಂಚಾಯತ್ ಯೂನಿಯನ್ ಪ್ರೈಮರಿ ಶಾಲೆಯ ಕಟ್ಟಡ ಹೊಚ್ಚಹೊಸ ಕಟ್ಟಡದಂತೆ ಕಂಗೊಳಿಸುತ್ತಿದೆ. ಶಾಲೆಯ ಗೋಡೆಗಳಲ್ಲಿ ರಂಗುರಂಗಿನ ಚಿತ್ತಾರಗಳೂ ಮೂಡಿವೆ. ಅಷ್ಟೇ ಅಲ್ಲ, ದುರಸ್ತಿಯಿಲ್ಲದೆ ಸೊರಗಿದ್ದ ಕಟ್ಟಡ ಸಂಪೂರ್ಣವಾಗಿ ದುರಸ್ತಿಗೊಂಡಿದೆ.
ಹಿಂದೆಲ್ಲಾ ಮಳೆ ಸಂದರ್ಭ ಸೋರುತ್ತಿದ್ದ ಕಟ್ಟಡದಲ್ಲಿ ಈ ಶಾಲೆಯ 20 ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳುವುದು ಕಷ್ಟವಾಗಿತ್ತು. ಮಳೆ ನೀರೆಲ್ಲಾ ಕೊಠಡಿ ತುಂಬಾ ಹರಡಿ ಪಾಠಗಳತ್ತ ಗಮನ ಹರಿಸುವುದು ವಿದ್ಯಾರ್ಥಿಗಳಿಗೆ ಅಸಾಧ್ಯವಾಗಿತ್ತು.
ಆದರೆ ಈಗ ಯಾವುದೇ ಸಮಸ್ಯೆಯಿಲ್ಲ. ಇದಕ್ಕೆ ಕಾರಣ ಈ ಶಾಲೆಯ ಮುಖ್ಯೋಪಾಧ್ಯಾಯಿನಿ ಎನ್ ಪೂಂಗೊಡಿ. ಈ ಶಾಲೆಯ ಏಕೈಕ ಶಿಕ್ಷಕಿಯೂ ಆಗಿರುವ ಇವರ ಮುತುವರ್ಜಿಯಿಂದಲೇ ಈ ಸಮಸ್ಯೆಗೆ ಪರಿಹಾರ ದೊರಕಿದೆ. ಸರಕಾರ ನೀಡಿದ ರೂ. 1 ಲಕ್ಷ ವ್ಯಯಿಸಿ ಶಾಲೆಯ ಸೋರುತ್ತಿದ್ದ ಛಾವಣಿ ಸರಿಪಡಿಸಲಾಗಿದ್ದರೆ ಶಾಲೆಯ ಗೋಡೆಯ ಪೈಂಟಿಂಗಿಗೆ ಮುಖ್ಯೋಪಾಧ್ಯಾಯಿನಿ ತಾನೇ ಸ್ವತಃ ರೂ. 30,000 ವ್ಯಯಿಸಿದ್ದಾರೆ. ಅಲ್ಲದೇ ರೂ. 37,000ರಷ್ಟು ಹಣ ವ್ಯಯಿಸಿದ ಅವರು ಶಾಲೆಯ ನೆಲವನ್ನೂ ದುರಸ್ತಿಗೊಳಿಸಿದ್ದಾರೆ. ಪ್ರತಿ ದಿನ 55 ಕಿಮೀ ದೂರದ ಹೊಸೂರಿನಿಂದ ಅವರು ಶಾಲೆಗೆ ಆಗಮಿಸುತ್ತಾರೆ ಹಾಗೂ ಎಲ್ಲಾ ಜವಾಬ್ದಾರಿಯನ್ನೂ ಸಮರ್ಥವಾಗಿ ನಿಭಾಯಿಸುತ್ತಾರೆ.
"ಶಾಲೆಯ ಛಾವಣಿ ದುರಸ್ತಿಗೆ ಹಣಕಾಸು ಸಹಾಯಕ್ಕಾಗಿ ಮುಖ್ಯ ಶಿಕ್ಷಣಾಧಿಕಾರಿ ಮುರುಗನ್ ಅವರಿಗೆ ಮನವಿ ಮಾಡಿದ್ದೆ. ವಿವಿಧ ಉಲ್ಲಂಘನೆಗಳಿಗಾಗಿ ಟಿಪ್ಪರ್ ಲಾರಿಗಳಿಗೆ ವಿಧಿಸಲಾಗಿದ್ದ ದಂಡ ಮೊತ್ತದಿಂದ ಸಂಗ್ರಹಿಸಲಾದ ಹಣವನ್ನು ಬಳಸುವಂತೆ ಕೃಷ್ಣಗಿರಿ ಸಿಜೆಎಂ ಅವರು ಜೂನ್ ತಿಂಗಳಲ್ಲಿ ನೀಡಿದ ಆದೇಶದಂತೆ ರೂ 1 ಲಕ್ಷ ಮಂಜೂರಾಗಿತ್ತು," ಎಂದು ಮುಖ್ಯೋಪಾಧ್ಯಾಯಿನಿ ವಿವರಿಸುತ್ತಾರೆ.