×
Ad

​ದೇಶಕ್ಕೆ ಆಗುವ ಮುಜುಗರ ತಪ್ಪಿಸಲು ರೈತರ ಟ್ರ್ಯಾಕ್ಟರ್ ರ‍್ಯಾಲಿ ನಿಲ್ಲಿಸಿ: ಸುಪ್ರೀಂಗೆ ಕೇಂದ್ರ ಮೊರೆ

Update: 2021-01-12 09:12 IST

 ಹೊಸದಿಲ್ಲಿ, ಜ. 12: ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ಪ್ರಸ್ತಾವಿತ ಟ್ರಾಕ್ಟರ್ ರ್ಯಾಲಿಗೆ ತಡೆಯಾಜ್ಞೆ ನೀಡುವಂತೆ ಕೋರಿ ಕೇಂದ್ರ ಸರಕಾರ ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿದೆ.

ದೇಶದ ಗಣರಾಜ್ಯೋತ್ಸವದ ಸಂಭ್ರಮಾಚರಣೆ ಹಾಗೂ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವ ಪ್ರಯತ್ನ ಇದಾಗಿದೆ ಎಂದು ಮನವಿ ಹೇಳಿದೆ. ಪ್ರತಿಭಟನೆ ನಡೆಸುತ್ತಿರುವ ಸಣ್ಣ ಗುಂಪು ಅಥವಾ ಸಂಘಟನೆಗಳು ಗಣರಾಜ್ಯೋತ್ಸವದ ದಿನ ಟ್ರಾಕ್ಟರ್, ಟ್ರಾಲಿ, ವಾಹನ ರ್ಯಾಲಿ ನಡೆಸಲು ಯೋಜಿಸಿದೆ ಎಂದು ವಿವಿಧ ಮೂಲಗಳಿಂದ ಭದ್ರತಾ ಸಂಸ್ಥೆಗೆೆ ತಿಳಿದು ಬಂದಿದೆ. ಗಣರಾಜ್ಯೋತ್ಸವದ ದಿನದಂದು ರಾಷ್ಟ್ರದ ಸಂಭ್ರಮಾಚರಣೆಗೆ ಅಡ್ಡಿ ಉಂಟು ಮಾಡುವ ಉದ್ದೇಶವನ್ನು ಈ ಪ್ರಸ್ತಾವಿತ ರ್ಯಾಲಿ ಹೊಂದಿದೆ. ಅಲ್ಲದೆ, ಇದು ಕಾನೂನು ಸುವ್ಯಸ್ಥೆ ಕೂಡ ಅಡ್ಡಿ ಉಂಟು ಮಾಡುವ ಸಾಧ್ಯತೆ ಇದೆ. ಆದುದರಿಂದ ನಾಯಾಲಯ ನಿರ್ದೇಶನ ನೀಡಬೇಕು ಎಂದು ಕೇಂದ್ರ ಸರಕಾರದ ಮನವಿಯಲ್ಲಿ ಹೇಳಿದೆ.

 ಗಣರಾಜ್ಯೋತ್ಸವದ ಕಾರ್ಯಕ್ರಮಕ್ಕೆ ಅದರದ್ದೇ ಆದ ಸಾಂವಿಧಾನಿಕ ಹಾಗೂ ಚಾರಿತ್ರಿಕ ಮಹತ್ವ ಇದೆ. ಇದು ಪ್ರತ್ಯೇಕವಾದ ಸ್ವತಂತ್ರ ಕಾರ್ಯಕ್ರಮವಲ್ಲ. ಬದಲಾಗಿ ಜನವರಿ 26ರಂದು ನಡೆಯುವ ಪ್ರತಿಯೊಂದು ಕಾರ್ಯಕ್ರಮದ ಪೂರ್ವಾಭ್ಯಾಸ ಜನವರಿ 23ರಂದು ನಡೆಯುತ್ತದೆ. ಜನವರಿ 28ರಂದು ಎನ್‌ಸಿಸಿ ರ್ಯಾಲಿ ಎಂದು ಕರೆಯಲಾಗುವ ವಿಧ್ಯುಕ್ತ ಕಾರ್ಯಕ್ರಮ ನಡೆಯಲಿದೆ. ಅದನ್ನು ಅನುಸರಿಸಿ ಜನವರಿ 29ರಂದು ‘ಬೀಟಿಂಗ್ ದಿ ರಿಟ್ರೀಟ್’ ಕಾರ್ಯಕ್ರಮ ನಡೆಯಲಿದೆ.

 ಜನವರಿ 30ರಂದು ಹುತಾತ್ಮರ ದಿನ ಆಚರಿಸಲಾಗುತ್ತದೆ. ಅಂದು ವಿದ್ಯುಕ್ತ ಕಾರ್ಯಕ್ರಮಗಳು ಅಂತ್ಯಗೊಳ್ಳುತ್ತದೆ ಎಂದು ಮನವಿ ಹೇಳಿದೆ. ಈ ಕಾರ್ಯಕ್ರಮಕ್ಕೆ ಉಂಟಾಗುವ ಯಾವುದೇ ಅಡ್ಡಿ ಕೇವಲ ಕಾನೂನು ಹಾಗೂ ಸುವ್ಯವಸ್ಥೆ, ಸಾರ್ವಜನಿಕ ವ್ಯವಸ್ಥೆ, ಸಾರ್ವಜನಿಕ ಹಿತಾಸಕ್ತಿ ವಿರುದ್ಧ ಮಾತ್ರವಲ್ಲ, ಬದಲಾಗಿ ಇದು ದೇಶಕ್ಕೆ ಅತಿ ದೊಡ್ಡ ಮುಜುಗರ ಉಂಟು ಮಾಡಲಿದೆ ಎಂದು ಹೇಳಿರುವ ಕೇಂದ್ರ ಸರಕಾರ, ಯಾರೇ ಆಯೋಜಿಸುವ ಯಾವುದೇ ಪ್ರತಿಭಟನಾ ರ್ಯಾಲಿ ಅಥವಾ ಟ್ರಾಕ್ಟರ್ ರ್ಯಾಲಿ, ಟ್ರೋಲಿ ರ್ಯಾಲಿ, ವಾಹನ ರ್ಯಾಲಿ ಅಥವಾ ಇತರ ಯಾವುದೇ ರೀತಿಯ ರ್ಯಾಲಿ (ಯಾವುದೇ ಪ್ರತಿಭಟನಾ ರ್ಯಾಲಿ ಯಾವುದೇ ರೀತಿಯಲ್ಲಿ )ದಿಲ್ಲಿ ಎನ್‌ಸಿಆರ್ ಪ್ರವೇಶಿಸದಂತೆ ತಡೆಯಾಜ್ಞೆ ನೀಡುವಂತೆ ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಮಾಡಿದೆ. ರಾಷ್ಟ್ರೀಯ ಸಂಭ್ರಮಾಚರಣೆಯ ದಿನ ಭದ್ರತಾ ವ್ಯವಸ್ಥೆ ಬಲಪಡಿಸಲಾಗಿದೆ ಎಂದು ಪ್ರತಿಪಾದಿಸಿದ ಕೇಂದ್ರ ಸರಕಾರ, ರ್ಯಾಲಿ ಗಂಭೀರ ಕಾನೂನು ಸುವ್ಯವಸ್ಥೆಯ ಸಮಸ್ಯೆ ಸೃಷ್ಟಿಸಬಹುದು ಹಾಗೂ ದೇಶಕ್ಕೆ ಮುಜುಗರ ಉಂಟು ಮಾಡಬಹುದು ಎಂದು ಹೇಳಿದೆ.

ಪ್ರತಿಭಟಿಸುವ ಹಕ್ಕು ಸಾರ್ವಜನಿಕ ಹಿತಾಸಕ್ತಿ ಹಾಗೂ ಕಾನೂನು ವ್ಯವಸ್ಥೆಯ ರಕ್ಷಣೆಯನ್ನು ಹೊಂದಿಕೊಂಡಿದೆ. ಪ್ರತಿಭಟನೆಯ ಹಕ್ಕಿನಲ್ಲಿ ಜಾಗತಿಕ ಮಟ್ಟದಲ್ಲಿ ದೇಶವನ್ನು ಮುಜುಗರ ಉಂಟು ಮಾಡುವ ವಿಚಾರ ಒಳಗೊಂಡಿಲ್ಲ ಎಂದು ಕೇಂದ್ರ ಸರಕಾರ ತನ್ನ ಮನವಿಯಲ್ಲಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News