ದೇಶದಲ್ಲಿ 208 ದಿನಗಳ ಕನಿಷ್ಠ ಮಟ್ಟಕ್ಕೆ ಇಳಿದ ಕೋವಿಡ್ ಸೋಂಕು
ಹೊಸದಿಲ್ಲಿ, ಜ.12: ದೇಶದಲ್ಲಿ ದೈನಿಕ ಕೊರೋನ ಪ್ರಕರಣ ಸಂಖ್ಯೆ 12,500ಕ್ಕೆ ಇಳಿದಿದ್ದು, ಇದು 208 ದಿನಗಳಲ್ಲೇ ಕನಿಷ್ಠ ಎಂದು ಕೇಂದ್ರ ಆರೋಗ್ಯ ಇಲಾಖೆ ಪ್ರಕಟಿಸಿದೆ. ಕಳೆದ ಜೂನ್ 22ರ ಬಳಿಕ ಮೊದಲ ಬಾರಿಗೆ ದೇಶದಲ್ಲಿ ದೈನಿಕ ಪ್ರಕರಣಗಳ ಸಂಖ್ಯೆ 15,000ಕ್ಕಿಂತ ಕಡಿಮೆಯಾಗಿದೆ. ಸೋಮವಾರ ದೇಶದಲ್ಲಿ 12,507 ಹೊಸ ಪ್ರಕರಣಗಳು ದೃಢಪಟ್ಟಿವೆ.
ದೇಶದಲ್ಲಿ ಇದಕ್ಕೂ ಮುನ್ನ 15 ಸಾವಿರಕ್ಕಿಂತ ಕಡಿಮೆ ಅಂದರೆ 14,778 ಪ್ರಕರಣಗಳು ಜೂನ್ 22ರಂದು ದಾಖಲಾಗಿದ್ದವು. ಸೋಮವಾರ ದಾಖಲಾದ್ದಕ್ಕಿಂತ ಕಡಿಮೆ ಪ್ರಕರಣ (10,914) ಕಳೆದ ವರ್ಷದ ಜೂನ್ 16ರಂದು ವರದಿಯಾಗಿತ್ತು.
ಈ ನಡುವೆ ದೇಶದಲ್ಲಿ ಒಟ್ಟು ದೃಢಪಟ್ಟ ಪ್ರಕರಣಗಳ ಸಂಖ್ಯೆ 1,04,66,595ಕ್ಕೇರಿದ್ದು, ಸೋಂಕಿತರ ಸಾವಿನ ಸಂಖ್ಯೆ 1,51,160ಕ್ಕೇರಿದೆ. ಸೋಮವಾರ 169 ಸೋಂಕಿತರು ಮೃತಪಟ್ಟಿದ್ದು, ರವಿವಾರ ದಾಖಲಾದ ಸಾವಿನ ಸಂಖ್ಯೆ (161)ಗಿಂತ ಸ್ವಲ್ಪ ಅಧಿಕ.
ಸೋಮವಾರ ದಾಖಲಾಗಿರುವ ಒಟ್ಟು ಪ್ರಕರಣಗಳ ಸಂಖ್ಯೆ ಹಿಂದಿನ ದಿನದ ಸಂಖ್ಯೆಗಿಂತ ಸುಮಾರು 4 ಸಾವಿರದಷ್ಟು ಅಂದರೆ ಶೇಕಡ 25ರಷ್ಟು ಕಡಿಮೆ. ಆದರೆ ವಾರಾಂತ್ಯದಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ಕಡಿಮೆ ಸಂಖ್ಯೆಯ ಪರೀಕ್ಷೆಗಳು ನಡೆದಿರುವುದು ಕೂಡಾ ಪ್ರಕರಣಗಳ ಸಂಖ್ಯೆ ಇಳಿಕೆಗೆ ಕಾರಣ. ರವಿವಾರ ದೇಶದಲ್ಲಿ 6.6 ಲಕ್ಷ ಮಾದರಿಗಳ ಪರೀಕ್ಷೆ ನಡೆಸಲಾಗಿದ್ದು, ಇದು ಹಿಂದಿನ ದಿನದ ಪರೀಕ್ಷೆಗೆ ಹೋಲಿಸಿದರೆ 1.8 ಲಕ್ಷದಷ್ಟು ಕಡಿಮೆ.