×
Ad

ಮಹಿಳೆ ಮೇಲೆ ಅತ್ಯಾಚಾರ, ಚಿತ್ರಹಿಂಸೆ; ಬಾಲಕಿಯನ್ನು ಅತ್ಯಾಚಾರ ಎಸಗಿ ಕೊಲೆ

Update: 2021-01-12 10:00 IST

ಭೋಪಾಲ್, ಜ.12: ಇಡೀ ನಾಗರಿಕ ಸಮಾಜ ತಲೆತಗ್ಗಿಸುವ ಎರಡು ಅತ್ಯಾಚಾರ ಪ್ರಕರಣಗಳು ಮಧ್ಯಪ್ರದೇಶದಲ್ಲಿ ಬೆಳಕಿಗೆ ಬಂದಿವೆ. ದಿಲ್ಲಿ ನಿರ್ಭಯಾ ಪ್ರಕರಣವನ್ನು ನೆನಪಿಸುವ ರೀತಿಯಲ್ಲಿ, ಸಿದ್ಧಿ ಜಿಲ್ಲೆಯಲ್ಲಿ 45 ವರ್ಷದ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಮೂವರು ಆಕೆಗೆ ಕಬ್ಬಿಣದ ರಾಡ್‌ನಿಂದ ಚಿತ್ರಹಿಂಸೆ ನೀಡಿದ್ದಾರೆ; ಮತ್ತೊಂದು ಪ್ರಕರಣದಲ್ಲಿ ಖಂಡ್ವಾ ಜಿಲ್ಲೆಯಲ್ಲಿ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ 45 ವರ್ಷದ ವ್ಯಕ್ತಿಯೊಬ್ಬ, ಪ್ರಕರಣ ಮುಚ್ಚಿಹಾಕುವ ಸಲುವಾಗಿ ಆಕೆಯನ್ನು ಉಸಿರುಗಟ್ಟಿಸಿ ಸಾಯಿಸಿದ್ದಾನೆ.

ಸಿದ್ಧಿ ಜಿಲ್ಲೆಯ ಅಮಿಲಿಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಮೊದಲ ಪ್ರಕರಣದಲ್ಲಿ, ಚಹಾ ಅಂಗಡಿ ನಡೆಸುತ್ತಿದ್ದ 45 ವರ್ಷದ ಮಹಿಳೆ ತನ್ನ ಗುಡಿಸಲಲ್ಲಿ ಮಲಗಿದ್ದಾಗ ಆರೋಪಿಗಳು ಬಂದು ಬಾಗಿಲು ಬಡಿದು ನೀರು ಕೇಳಿದ್ದಾರೆ. ಯಾರೂ ಇಲ್ಲ ಎಂದು ಮಹಿಳೆ ಹೇಳಿದಾಗ ಗುಡಿಸಲಿಗೆ ನುಗ್ಗಿ ಅತ್ಯಾಚಾರ ಎಸಗಿದ್ದಾರೆ. ಬಳಿಕ ಕಬ್ಬಿಣದ ಸಲಾಕೆಯಿಂದ ಚಿತ್ರಹಿಂಸೆ ನೀಡಿದ್ದಾರೆ. ಮಹಿಳೆಯ ಪತಿ ನಾಲ್ಕು ವರ್ಷಗಳ ಹಿಂದೆ ಮೃತಪಟ್ಟಿದ್ದ. ಮಹಿಳೆಯನ್ನು ಜಿಲ್ಲಾ ಆಸ್ಪತ್ರೆಗೆ ಹಾಗೂ ಬಳಿಕ ರೇವಾ ಸಂಜಯ್ ‌ಗಾಂಧಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಐಜಿಪಿ ಉಮೇಶ್ ಜೋಹಾ ಹೇಳಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ಖಂಡ್ವಾ ಜಿಲ್ಲೆಯ ಜಮಾನಿಯಾ ಗ್ರಾಮದಿಂದ ಸೋಮವಾರ ಬೆಳಗ್ಗೆ 13 ವರ್ಷದ ಶಾಲಾ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಲಾಗಿದೆ. ಕಿರಾಣಿ ಅಂಗಡಿಯಿಂದ ಬಿಸ್ಕೆಟ್ ಖರೀದಿಸಲು ಹೋಗಿದ್ದ 9ನೇ ತರಗತಿ ವಿದ್ಯಾರ್ಥಿನಿಯನ್ನು ಅಂಗಡಿ ಮಾಲಕ ಮನೆಯೊಳಕ್ಕೆ ಎಳೆದುಕೊಂಡು ಅತ್ಯಾಚಾರ ಎಸಗಿ, ಪ್ರಕರಣ ಮುಚ್ಚಿ ಹಾಕುವ ಸಲುವಾಗಿ ಉಸಿರುಗಟ್ಟಿಸಿ ಸಾಯಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News