ಬೆಂಗಳೂರು ಸಹಿತ 13 ನಗರಗಳಿಗೆ ಕೊರೋನ ವೈರಸ್ ಲಸಿಕೆ ಕೋವಿಶೀಲ್ಡ್ ರವಾನೆ
ಹೊಸದಿಲ್ಲಿ: ಸೀರಮ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾದ ಕೊರೋನ ವೈರಸ್ ಲಸಿಕೆ ಕೋವಿಶೀಲ್ಡ್ ಮೊದಲ ಬ್ಯಾಚ್ ಗಳನ್ನು ಪುಣೆಯಿಂದ ಇಂದು ಬೆಳಗ್ಗೆ ರವಾನಿಸಲಾಗಿದೆ. ರಾಷ್ಟ್ರವ್ಯಾಪಿ ಲಸಿಕೆ ನೀಡಿಕೆ ಅಭಿಯಾನ ಆರಂಭವಾಗಲು 4 ದಿನಗಳ ಮುಂಚಿತವಾಗಿ ಬೆಂಗಳೂರು ಸಹಿತ 13 ನಗರಗಳಿಗೆ ಲಸಿಕೆಗಳನ್ನು ಬಿಗಿಯಾದ ಭದ್ರತೆಯ ನಡುವೆ, ತಾಪಮಾನ ನಿಯಂತ್ರಿತ ಮೂರು ಟ್ರಕ್ ಗಳ ಮೂಲಕ ಬೆಳಗ್ಗೆ 5 ಗಂಟೆಗೆ ಪುಣೆಯಿಂದ ವಿಮಾನ ನಿಲ್ದಾಣಕ್ಕೆ ಕಳುಹಿಸಲಾಗಿದೆ.
ವಿಮಾನ ನಿಲ್ದಾಣದಿಂದ ಲಸಿಕೆಗಳನ್ನು 13 ನಗರಗಳಿಗೆ ರವಾನಿಸಲಾಗುತ್ತದೆ.
"ರೆಡಿ ಸೆಟ್ ಗೋ! ಸ್ಟ್ಯಾಂಡ್ ಬೈ ಇಂಡಿಯಾ! ರೋಗವನ್ನು ಕೊಲ್ಲುವ ಲಸಿಕೆಯನ್ನು ಈಗ ದೇಶಾದ್ಯಂತ ವಿತರಣೆಗಾಗಿ ವಿಮಾನದಲ್ಲಿ ಲೋಡ್ ಮಾಡಲಾಗುತ್ತಿದೆ'' ಎಂದು ಪುಣೆ ವಿಮಾನ ನಿಲ್ದಾಣ ಟ್ವೀಟ್ ಮಾಡಿದೆ.
"ಸ್ಪೈಸ್ ಜೆಟ್ ಹಾಗೂ ಗೋ ಏರ್ ಸಂಸ್ಥೆಗೆ ಸೇರಿರುವ ಮೊದಲೆರಡು ವಿಮಾನಗಳು ದಿಲ್ಲಿ ಹಾಗೂ ಚೆನ್ನೈಗೆ ಲಸಿಕೆಗಳನ್ನು ಸಾಗಿಸಿವೆ. ಇಂದು ಏರ್ ಇಂಡಿಯಾವು, ಸ್ಪೈಸ್ ಜೆಟ್ ಹಾಗೂ ಇಂಡಿಗೊ ವಿಮಾನಗಳು ಪುಣೆಯಿಂದ 56.6 ಲಕ್ಷ ಡೋಸ್ ಗಳನ್ನು ದಿಲ್ಲಿ, ಚೆನ್ನೈ, ಕೋಲ್ಕತಾ, ಗುವಾಹಟಿ, ಶಿಲ್ಲಾಂಗ್, ಅಹ್ಮದಾಬಾದ್, ಹೈದರಾಬಾದ್, ವಿಜಯವಾಡ, ಭುವನೇಶ್ವರ, ಪಾಟ್ನಾ, ಬೆಂಗಳೂರು, ಲಕ್ನೊ ಹಾಗೂ ಚಂಡೀಗಢಕ್ಕೆ ಸಾಗಿಸಿವೆ'' ಎಂದು ಕೇಂದ್ರ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಟ್ವೀಟಿಸಿದ್ದಾರೆ.
್ಲಟ್ರಕ್ ಗಳು ಲಸಿಕೆಗಳಿರುವ 478 ಬಾಕ್ಸ್ ಗಳನ್ನು ಹೊತ್ತು ವಿಮಾನ ನಿಲ್ದಾಣಕ್ಕೆ ಸಾಗಿದ್ದು, ಪ್ರತಿ ಬಾಕ್ಸ್ 32 ಕೆಜಿ ಭಾರ ವಿದೆ ಎಂದು ಸುದ್ದಿಸಂಸ್ಥೆ ಪಿಟಿಐಗೆ ಹೆಸರು ಹೇಳಲಿಚ್ಛಿಸದ ಅಧಿಕಾರಿ ತಿಳಿಸಿದರು.