ವಂಶ ರಾಜಕಾರಣವನ್ನು ಬೇರು ಸಮೇತ ಕಿತ್ತೆಸೆಯುವ ಅಗತ್ಯವಿದೆ: ಪ್ರಧಾನಿ ಮೋದಿ

Update: 2021-01-12 17:52 GMT

ಹೊಸದಿಲ್ಲಿ, ಜ. 12: ವಂಶ ರಾಜಕಾರಣ ಪ್ರಜಾಪ್ರಭುತ್ವದ ಅತಿ ದೊಡ್ಡ ಶತ್ರು ಎಂದು ಮಂಗಳವಾರ ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ, ಇದನ್ನು ಸಂಪೂರ್ಣವಾಗಿ ಬುಡಸಮೇತ ಕಿತ್ತೆಸೆಯಬೇಕು ಎಂದಿದ್ದಾರೆ. ಈಗ ವಂಶದ ಹೆಸರಿನ ಆಧಾರದಲ್ಲಿ ಚುನಾವಣೆಯಲ್ಲಿ ಜಯ ಗಳಿಸಿದವರ ಭವಿಷ್ಯ ಕ್ಷೀಣಿಸುತ್ತಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ವೀಡಿಯೊ ಕಾನ್ಫರೆನ್ಸ್ ಮೂಲಕ ಎರಡನೇ ರಾಷ್ಟೀಯ ಯುವ ಸಂಸತ್ ಉತ್ಸವದ ಸಮಾರೋಪದಲ್ಲಿ ಮಾತನಾಡಿದ ಪ್ರಧಾನಿ, ಯುವ ಜನರು ರಾಜಕೀಯ ಸೇರುವಂತೆ ಪ್ರಚೋದಿಸಿದರು ಹಾಗೂ ನೀವು ರಾಜಕೀಯ ಪ್ರವೇಶಿಸದೇ ಇದ್ದರೆ ವಂಶ ರಾಜಕಾರಣದ ವಿಷ ಮುಂದುವರಿದು ಪ್ರಜಾಪ್ರಭುತ್ವವನ್ನು ಶಿಥಿಲಗೊಳಿಸಲಿದೆ ಎಂದರು.

‘‘ಪ್ರಜಾಪ್ರಭುತ್ವದ ಅತಿ ದೊಡ್ಡ ಶತ್ರು ಈಗಲೂ ಅಸ್ತಿತ್ವದಲ್ಲಿದೆ. ಅದು ವಂಶ ರಾಜಕಾರಣ. ದೇಶದ ಮುಂದೆ ವಂಶ ರಾಜಕಾರಣದ ಸವಾಲು ಇದೆ. ಅದನ್ನು ಬುಡ ಸಮೇತ ನಿರ್ಮೂಲನೆಗೊಳಿಸಬೇಕು’’ ಎಂದು ಪ್ರಧಾನಿ ಹೇಳಿದರು. ‘‘ವಂಶದ ಹೆಸರಲ್ಲಿ ಚುನಾವಣೆಯಲ್ಲಿ ಜಯ ಗಳಿಸಿದವರ ಭವಿಷ್ಯ ಕ್ಷೀಣಿಸುತ್ತಿದೆ (ರಾಜಕೀಯದಲ್ಲಿ) ಎಂಬುದು ಸತ್ಯ. ಆದರೆ, ರಾಜಕೀಯದಲ್ಲಿ ಈ ವಂಶ ರಾಜಕಾರಣದ ರೋಗ ಸಂಪೂರ್ಣ ಗುಣವಾಗಿಲ್ಲ. ಈಗಲೂ ಕೆಲವರ ರಾಜಕೀಯ ತಮ್ಮ ಕುಟುಂಬವನ್ನು ಉಳಿಸುವ ಉದ್ದೇಶವನ್ನು ಹೊಂದಿದೆ’’ ಎಂದು ಕಾಂಗ್ರೆಸ್ ಸೇರಿದಂತೆ ಹಲವು ಪ್ರತಿಪಕ್ಷಗಳನ್ನು ಅವರು ಸುವ್ಯಕ್ತವಾಗಿ ಟೀಕಿಸಿದ್ದಾರೆ. ವಂಶ ರಾಜಕಾರಣ ಅನುಸರಿಸುವವರು ಎಂದಿಗೂ ದೇಶಕ್ಕೆ ಮೊದಲ ಆದ್ಯತೆ ನೀಡಲಾರರು. ಅವರಿಗೆ ‘ನಾನು ಮತ್ತು ನನ್ನ ಕುಟುಂಬವೇ ಮುಖ್ಯ’ ಆಗುತ್ತದೆ ಎಂದು ಅವರು ತಿಳಿಸಿದರು.

‘‘ಎಲ್ಲ ಕ್ಷೇತ್ರಗಳಂತೆ ರಾಜಕೀಯ ಕ್ಷೇತ್ರದಲ್ಲೂ ಯುವಜನತೆಯ ಅಗತ್ಯತೆ ಇದೆ. ಅವರ ಆಲೋಚನೆ, ಶಕ್ತಿ, ಉತ್ಸಾಹ ದೇಶದ ರಾಜಕಾರಣಕ್ಕೆ ಅಗತ್ಯತೆ ಇದೆ. ಈ ಹಿಂದೆ ಯಾರೇ ಯುವಕರು ರಾಜಕೀಯದತ್ತ ಮುಖ ಮಾಡಿದರೆ ಅವರ ಕುಟುಂಬ ಆತ ದಾರಿ ತಪ್ಪುತ್ತಿದ್ದಾನೆ ಎಂದು ಹೇಳುತ್ತಿತ್ತು’’ ಎಂದು ಪ್ರಧಾನಿ ಹೇಳಿದರು. ಎಲ್ಲವೂ ಬದಲಾಗಬಹುದು. ಆದರೆ, ರಾಜಕೀಯ ಬದಲಾಗದು ಎಂಬ ಜನರು ಆಗಾಗ ಹೇಳುತ್ತಿರುವುದನ್ನು ಉಲ್ಲೇಖಿಸಿದ ಪ್ರಧಾನಿ, ಇಂದು ದೇಶದ ಜನರು ಎಷ್ಟು ಜಾಗೃತರಾಗಿದ್ದಾರೆ ಎಂದರೆ, ಅವರು ಪ್ರಾಮಾಣಿಕ ಜನರೊಂದಿಗೆ ನಿಂತು, ಅವರಿಗೆ ಅವಕಾಶ ನೀಡುತ್ತಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News