ರೈತರ ಪ್ರತಿಭಟನೆಯಲ್ಲಿ ಖಾಲಿಸ್ತಾನಿಗಳು ನುಸುಳಿದ್ದಾರೆ: ಸುಪ್ರೀಂಕೋರ್ಟ್ ಗೆ ತಿಳಿಸಿದ ಕೇಂದ್ರ ಸರಕಾರ

Update: 2021-01-12 13:52 GMT

ಹೊಸದಿಲ್ಲಿ: ದಿಲ್ಲಿಯ ಸುತ್ತಮುತ್ತ ರೈತರ ತೀವ್ರ ಪ್ರತಿಭಟನೆಗೆ ಕಾರಣವಾಗಿರುವ ಮೂರು ಕೃಷಿ ಕಾಯ್ದೆಗಳಿಗೆ ಸುಪ್ರೀಂಕೋರ್ಟ್ ಇಂದು ತಾತ್ಕಾಲಿಕ ತಡೆ ಹೇರಿದ್ದು, ವಿಚಾರಣೆಯ ವೇಳೆ ರೈತರ ಪ್ರತಿಭಟನೆಯಲ್ಲಿ ಖಲಿಸ್ತಾನಿಗಳು ನುಸುಳಿದ್ದಾರೆ ಎಂದು ಸರಕಾರ ವಾದಿಸಿದೆ.

ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಈ ರೀತಿಯ ವಾದ ಮಂಡಿಸಿದ್ದು, ಅಫಿಡವಿಟ್ ಸಲ್ಲಿಸುವಂತೆ ಸುಪ್ರೀಂಕೋರ್ಟ್ ವೇಣುಗೋಪಾಲ್ ಗೆ ತಿಳಿಸಿತು. ಗುಪ್ತಚರ ಘಟಕದ( ಐಬಿ)ಮಾಹಿತಿಯೊಂದಿಗೆ ನಾಳೆಯೊಳಗೆ ಅಫಿಡವಿಟ್ ಸಲ್ಲಿಸುವೆ ಎಂದು ವೇಣುಗೋಪಾಲ್ ತಿಳಿಸಿದರು.

ಕೃಷಿ ಕಾನೂನುಗಳನ್ನು ಬೆಂಬಲಿಸುವ ಅರ್ಜಿದಾರರ ಪರ ಹಾಜರಾದ ಹಿರಿಯ ವಕೀಲ ಹರೀಶ್ ಸಾಳ್ವೆ, ಖಲಿಸ್ತಾನ ಪರ ರ್ಯಾಲಿಗಳನ್ನು ಆಯೋಜಿಸಿದ್ದವರು ಪ್ರತಿಭಟನೆಯಲ್ಲಿ ಧ್ವಜವನ್ನು ಹಾರಿಸಿದ್ದರು ಎಂದರು.

ಆರೋಪಗಳನ್ನು ಖಚಿತಪಡಿಸಬಹುದೇ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ಅಟಾರ್ನಿ ಜನರಲ್ ರನ್ನು ಕೇಳಿದರು.

ನಿಷೇಧಿತ ಸಂಘಟನೆ ಪ್ರತಿಭಟನೆಯಲ್ಲಿ ಒಳ ನುಸುಳಿದ್ದರೆ, ಯಾರಾದರೂ ಇಲ್ಲಿ ದಾಖಲೆ ಸಮೇತ ಆರೋಪ ಮಾಡುತ್ತಿದ್ದರೆ, ನೀವು ಅದನ್ನು ದೃಢೀಕರಿಸಬೇಕು. ನಾಳೆಯೊಳಗೆ ನೀವು ಅಫಿಡವಿಟ್ ಸಲ್ಲಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.

ಹೌದು,ನಾನು ಅಫಿಡವಿಟ್ ಸಲ್ಲಿಸುತ್ತೇನೆ. ಗುಪ್ತಚರ ಘಟಕದ ದಾಖಲೆಗಳನ್ನು ಇಡುತ್ತೇನೆ ಎಂದು ಅಟಾರ್ನಿ ಜನರಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News