ಹಕ್ಕಿಜ್ವರದ ಕುರಿತು ಭಯಪಡಬೇಡಿ, ಅದು ಚಳಿಗಾಲದಲ್ಲಿ ಸಾಮಾನ್ಯ: ಪಶು ಸಂಗೋಪನಾ ಇಲಾಖೆ

Update: 2021-01-13 06:17 GMT

ಪುಣೆ,ಜ.13: ಹಲವಾರು ರಾಜ್ಯಗಳಲ್ಲಿ ಹಕ್ಕಿಗಳು ಆಕಸ್ಮಿಕವಾಗಿ ಸಾಯುತ್ತಿದ್ದು, ಹಕ್ಕಿಜ್ವರದ ಶಂಕೆ ವ್ಯಕ್ತವಾಗಿದೆ. ಕೆಲವು ಕಡೆಗಳಲ್ಲಿ ಹಕ್ಕಿ ಜ್ವರ ದೃಢಪಟ್ಟಿದೆ. ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಕುರಿತು ಮಾತನಾಡಿದ ಕೇಂದ್ರ ಸರಕಾರದ ಪಶು ಸಂಗೋಪನೆ ಮತ್ತು ಮೀನುಗಾರಿಕಾ ಇಲಾಖೆಯ ಕಾರ್ಯದರ್ಶಿ ಅತುಲ್ ಚತುರ್ವೇದಿ, “ಏವಿಯನ್ ಫ್ಲೂ (ಹಕ್ಕಿಜ್ವರ)ವನ್ನು ಬೇರೆ ಪ್ರದೇಶಗಳಿಂದ ವಲಸೆ ಬರುವ ಹಕ್ಕಿಗಳು ಇಲ್ಲಿನ ಹಕ್ಕಿಗಳಿಗೆ ಹರಡುತ್ತದೆ. ಆದ್ದರಿಂದ ಹಕ್ಕಿಜ್ವರ ಉಂಟಾಗುತ್ತದೆ. ಈ ಕುರಿತು ಹೆಚ್ಚಿನ ಭಯಪಡಬೇಕಾಗಿಲ್ಲ. ಇದು ಚಳಿಗಾಲದ ಸಂದರ್ಭದಲ್ಲಿ ಸಾಂಆನ್ಯವಾಗಿರುವ ಪ್ರಕ್ರಿಯೆಯಾಗಿದೆ ಎಂದು ಹೇಳಿಕೆ ನೀಡಿದ್ದಾರೆ.

ದೇಶದ ಹಲವು ಕಡೆಗಳಲ್ಲಿ ಹಕ್ಕಿಜ್ವರದ ಕುರಿತು ಪ್ರಕರಣಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಮಾತನಾಡಿ ಚತುರ್ವೇದಿ, ಹಕ್ಕಿಜ್ವರ ಹೆಚ್ಚಾಗಿ ಹರಡುವುದು ಚಳಿಗಾಳದ ತಿಂಗಳುಗಳಲ್ಲಾಗಿದೆ. ಸೆಪ್ಟೆಂಬರ್-ಅಕ್ಟೋಬರ್ ತಿಂಗಳುಗಳಲ್ಲಿ ಪ್ರಾರಂಭಗೊಂಡರೆ ಫೆಬ್ರವರಿ-ಮಾರ್ಚ್ ವರೆಗೂ ಇರುತ್ತದೆ. ಈ ಕುರಿತಾದಂತೆ ಸುಮ್ಮನೆ ವದಂತಿಗಳನ್ನು ಹರಡಿ ಜನರನ್ನು ಭಯಭೀತರನ್ನಾಗಿ ಮಾಡುವ ಅವಶ್ಯಕತೆಯಿಲ್ಲ. ಕೆಲವೊಮ್ಮೆ ಹಕ್ಕಿಗಳ ಮರಣ ಸಂಖ್ಯೆಯಲ್ಲಿ ಹೆಚ್ಚಳವಿರುತ್ತದೆ. ಇನ್ನು ಕೆಲವೊಮ್ಮೆ ಕಡಿಮೆ ಇರುತ್ತದೆ. ವಲಸೆ ಬರುವ ಹಕ್ಕಿಗಳಿಂದಾಗಿ ಈ ತೊಂದರೆ ಉಂಟಾಗುತ್ತದೆ.”

ಸುಮಾರು 15 ವರ್ಷಗಳಿಂದೀಚೆಗೆ ಹಕ್ಕಿ ಜ್ವರದ ಪ್ರಕರಣಗಳು ಕಂಡು ಬರುತ್ತಿದ್ದು, ಇದುವರೆಗೂ ಹಕ್ಕಿಗಳಿಂದ ಮನುಷ್ಯನಿಗೆ ಈ ರೋಗ ಹರಡಿರುವ ಕುರಿತು ಯಾವುದೇ ಪ್ರಕರಣವು ವರದಿಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ. ಮೊಟ್ಟೆಯಾದರೂ, ಮಾಂಸವಾದರೂ, ಚೆನ್ನಾಗಿ ಬೇಯಿಸಿ ತಿಂದರೆ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದು ಅವರು ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News