ಭಂಡಾರಾ ಆಸ್ಪತ್ರೆಯಲ್ಲಿ 10 ಶಿಶುಗಳ ಮರಣ ಪ್ರಕರಣ: ಜಿಲ್ಲಾಧಿಕಾರಿಗೆ ಮಕ್ಕಳ ಆಯೋಗದ ಸಮನ್ಸ್

Update: 2021-01-13 17:01 GMT

ಹೊಸದಿಲ್ಲಿ, ಜ.13: ಮಹಾರಾಷ್ಟ್ರದಲ್ಲಿ ಕಳೆದ ಶನಿವಾರ ಆಸ್ಪತ್ರೆಯಲ್ಲಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ 10 ನವಜಾತ ಶಿಶುಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಕೈಗೊಂಡಿರುವ ಕ್ರಮಗಳ ಕುರಿತು ವರದಿ ಸಲ್ಲಿಸದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಭಂಡಾರಾ ಜಿಲ್ಲಾಧಿಕಾರಿಗೆ ಮಕ್ಕಳ ಹಕ್ಕುಗಳ ಕುರಿತ ರಾಷ್ಟ್ರೀಯ ಆಯೋಗ (ಎನ್‌ಸಿಪಿಸಿಆರ್) ಸಮನ್ಸ್ ನೀಡಿದೆ.

ನವಜಾತ ಶಿಶುಗಳು ಮೃತಪಟ್ಟ ಪ್ರಕರಣದಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ 48 ಗಂಟೆಯೊಳಗೆ ವರದಿ ಸಲ್ಲಿಸಬೇಕೆಂದು ಜನವರಿ 9ರಂದು ಭಂಡಾರಾ ಜಿಲ್ಲಾಧಿಕಾರಿಗೆ ಎನ್‌ಸಿಪಿಸಿಆರ್ ಸೂಚಿಸಿತ್ತು. ಆದರೆ ಜಿಲ್ಲಾಧಿಕಾರಿ ಕಚೇರಿಯಿಂದ ಯಾವುದೇ ವರದಿ ಕೈಸೇರಿಲ್ಲ ಎಂದು ಅಸಮಾಧಾನ ಸೂಚಿಸಿರುವ ಆಯೋಗ, ಸಂಬಂಧಿಸಿದ ದಾಖಲೆ, ದಸ್ತಾವೇಜು ಸಹಿತ ಜನವರಿ 18ರಂದು ಮಧ್ಯಾಹ್ನ 3:30ಕ್ಕೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನಡೆಯಲಿರುವ ಸಭೆಯಲ್ಲಿ, ವರದಿ ಸಲ್ಲಿಸಲು ಆಗಿರುವ ವಿಳಂಬಕ್ಕೆ ಕಾರಣ ವಿವರಿಸುವಂತೆ ಪತ್ರ ಬರೆದು ಸೂಚಿಸಿದೆ. ಜನವರಿ 9ರಂದು ಮಹಾರಾಷ್ಟ್ರದ ಭಂಡಾರಾ ಜಿಲ್ಲೆಯ ಸರಕಾರಿ ಆಸ್ಪತ್ರೆಯ ನವಜಾತ ಶಿಶುಗಳ ವಿಭಾಗದಲ್ಲಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ 1ರಿಂದ 3 ತಿಂಗಳು ಪ್ರಾಯದ 10 ಶಿಶುಗಳು ಮೃತಪಟ್ಟಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News