ಅಂತರ್ ಧರ್ಮೀಯ ವಿವಾಹಗಳಿಗೆ ನೋಟಿಸು ಪ್ರದರ್ಶಿಸುವ ಅಗತ್ಯವಿಲ್ಲ: ಹೈಕೋರ್ಟ್

Update: 2021-01-13 17:14 GMT

ಲಕ್ನೋ, ಜ. 12: ಅಂತರ್ ಧರ್ಮೀಯ ಜೋಡಿಗಳ ವಿವಾಹಗಳಿಗೆ ನೋಟಿಸ್ ಅನ್ನು ಕಡ್ಡಾಯವಾಗಿ ಪ್ರದರ್ಶಿಸುವುದು ಇನ್ನು ಮುಂದೆ ಐಚ್ಛಿಕವಾಗಿರಲಿದೆ ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯ ಬುಧವಾರ ಹೇಳಿದೆ. ಇದರಿಂದ ಅಂತರ್ ಧರ್ಮೀಯ ಜೋಡಿಗಳು ನಿಟ್ಟುಸಿರು ಬಿಡುವಂತಾಗಿದೆ. ಇಂತಹ ನೋಟಿಸುಗಳ ಪ್ರಕಟಣೆ ‘‘ಸ್ವಾತಂತ್ರ ಹಾಗೂ ಗೌಪ್ಯತೆಯ ಮೂಲಭೂತ ಹಕ್ಕಿನ ಮೇಲೆ ಆಕ್ರಮಣ ಮಾಡುತ್ತದೆ’’ ಎಂದು ನ್ಯಾಯಾಲಯ ಹೇಳಿದೆ. ಅಲ್ಲದೆ, ಇದು ಸರಕಾರ ಹಾಗೂ ಸರಕಾರೇತರ ಸಂಸ್ಥೆಗಳ ಹಸ್ತಕ್ಷೇಪವಿಲ್ಲದೆ ವಿವಾಹವನ್ನು ಆಯ್ಕೆ ಮಾಡುವ ಜೋಡಿಗಳ ಸ್ವಾತಂತ್ರದ ಮೇಲೆ ಪರಿಣಾಮ ಬೀರುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.

1954ರ ವಿಶೇಷ ವಿವಾಹ ಕಾಯ್ದೆಯ ಕಲಂ ಅಂತರ್ ಧರ್ಮೀಯ ಜೋಡಿಗಳು ವಿವಾಹವಾಗುವಾಗ ಲಿಖಿತ ನೋಟಿಸನ್ನು ಜಿಲ್ಲಾ ದಂಡಾಧಿಕಾರಿಗೆ ಸಲ್ಲಿಸಬೇಕು. ಪ್ರಾಯ, ಮಾನಸಿಕ ಆರೋಗ್ಯ ಹಾಗೂ ತಮ್ಮ ಸುಮುದಾಯಗಳ ಸಂಪ್ರದಾಯ ಸೇರಿದಂತೆ ಸಾಮಾನ್ಯ ನಿಯಮಗಳ ಉಲ್ಲಂಘನೆಯ ನೆಲೆಯಲ್ಲಿ 30 ದಿನಗಳ ಒಳಗೆ ವಿವಾಹಕ್ಕೆ ಆಕ್ಷೇಪ ವ್ಯಕ್ತಪಡಿಸಲು ಅವಕಾಶವಾಗುವಂತೆ ಕಚೇರಿಯಲ್ಲಿ ಅಧಿಕಾರಿಗಳು ಈ ನೋಟಿಸನ್ನು ಪ್ರದರ್ಶಿಸಬೇಕು ಎಂದು ಕಾನೂನು ಹೇಳುತ್ತದೆ.

ಮಂಗಳವಾರ ನೀಡಿದ 47 ಪುಟಗಳ ತೀರ್ಪಿನಲ್ಲಿ ನ್ಯಾಯಮೂರ್ತಿ ವಿವೇಕ್ ಚೌಧರಿ, ನೋಟಿಸನ್ನು ಪ್ರಕಟಿಸುವಂತೆ ಅಥವಾ ಪ್ರಕಟಿಸದಿರುವಂತೆ ಜೋಡಿಗಳು ಲಿಖಿತ ಮನವಿಯನ್ನು ವಿವಾಹ ನೋಂದಣಿ ಅಧಿಕಾರಿಗೆ ಸಲ್ಲಿಸಬಹುದು ಎಂದು ಹೇಳಿದ್ದಾರೆ.

ಅವರು ನೋಟಿಸನ್ನು ಪ್ರಕಟಿಸುವ ಮನವಿ ಮಾಡದೇ ಇದ್ದ ಸಂದರ್ಭದಲ್ಲಿ ವಿವಾಹ ನೋಂದಣಿ ಅಧಿಕಾರಿ, ಅಂತಹ ಯಾವುದೇ ನೋಟಿಸನ್ನು ಪ್ರಕಟಿಸಬಾರದು ಅಥವಾ ವಿವಾಹಕ್ಕೆ ಸಂಬಂಧಿಸಿದ ಆಕ್ಷೇಪಕ್ಕೆ ಅವಕಾಶ ನೀಡಬಾರದು ಹಾಗೂ ವಿವಾಹ ನೆರವೇರಲು ಅವಕಾಶ ನೀಡಬೇಕು ಎಂದು ತೀರ್ಪು ಹೇಳಿದೆ.

ಹಿಂದೂ ವ್ಯಕ್ತಿಯನ್ನು ವಿವಾಹವಾಗಲು ಹಿಂದೂ ಧರ್ಮಕ್ಕೆ ಮತಾಂತರವಾದ ಮುಸ್ಲಿಮ್ ಮಹಿಳೆ ಸಲ್ಲಿಸಿದ ಮನವಿಯ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಆದೇಶ ನೀಡಿದೆ. ತನ್ನ ಪತಿಯೊಂದಿಗೆ ಜೀವಿಸಲು ತಂದೆ ಅವಕಾಶ ನೀಡುತ್ತಿಲ್ಲ ಎಂದು ಮನವಿಯಲ್ಲಿ ಮಹಿಳೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News