ಬ್ರಿಸ್ಬೇನ್‌ನಲ್ಲೂ ಸಿರಾಜ್‌ಗೆ ಜನಾಂಗೀಯ ನಿಂದನೆ

Update: 2021-01-15 14:41 GMT

ಬ್ರಿಸ್ಬೇನ್, ಜ.15: ಸಿಡ್ನಿ ಟೆಸ್ಟ್‌ನಲ್ಲಿ ಕಿಡಿಗೇಡಿ ಪ್ರೇಕ್ಷಕರಿಂದ ಜನಾಂಗೀಯ ನಿಂದನೆಗೆ ಒಳಗಾಗಿದ್ದ ಭಾರತದ ವೇಗದ ಬೌಲರ್ ಮುಹಮ್ಮದ್ ಸಿರಾಜ್ ಇಲ್ಲಿನ ಗಾಬಾ ಸ್ಟೇಡಿಯಂನಲ್ಲಿ ಶುಕ್ರವಾರ ಆರಂಭವಾದ ನಾಲ್ಕನೇ ಟೆಸ್ಟ್‌ನಲ್ಲಿ ಕೆಲವು ಪ್ರೇಕ್ಷಕರಿಂದ ಮತ್ತೊಮ್ಮೆ ಜನಾಂಗೀಯ ನಿಂದನೆಗೆ ಗುರಿಯಾಗಿದ್ದಾರೆ.
 ಕೆಲವು ಪ್ರೇಕ್ಷಕರು ಸಿರಾಜ್‌ರನ್ನು ಪದೇ ಪದೇ ‘ಹುಳ’ಎಂದು ನಿಂದಿಸಿರುವುದಾಗಿ ‘ಸಿಡ್ನಿ ಮೊರ್ನಿಂಗ್ ಹೆರಾಲ್ಡ್’ ವರದಿ ಮಾಡಿದೆ.
ಸಿರಾಜ್‌ಗೆ ಮಾತ್ರವಲ್ಲ ಇಂದು ಪಾದಾರ್ಪಣೆ ಪಂದ್ಯವಾಡಿದ್ದ ವಾಷಿಂಗ್ಟನ್ ಸುಂದರ್‌ಗೂ ಈ ಕಹಿ ಅನುಭವವಾಗಿದೆ.
  ನನ್ನ ಹಿಂದೆ ಕುಳಿತ್ತಿದ್ದ ಇಬ್ಬರು ಪ್ರೇಕ್ಷಕರು ವಾಷಿಂಗ್ಟನ್ ಸುಂದರ್ ಹಾಗೂ ಸಿರಾಜ್‌ರನ್ನು ‘ಹುಳಗಳು’ಎಂದು ಕರೆದು ನಿಂದಿಸುತ್ತಿದ್ದರು.ಇಲ್ಲೂ ಸಿರಾಜ್‌ರನ್ನು ಗುರಿಯಾಗಿಸಿ ನಿಂದನೆ ಆರಂಭಿಸಲಾಗಿತ್ತು. ಅಲ್ಲದೆ ಸಿಡ್ನಿಗೆ ಹೋಲುವಂತಿತ್ತು ಎಂದು ಕೇಟ್ ಎಂಬ ಪ್ರೇಕ್ಷಕನ ಹೇಳಿಕೆಯನ್ನು ಉಲ್ಲೇಖಿಸಿ ‘ಸಿಡ್ನಿ ಮಾರ್ನಿಂಗ್ ಹೆರಾಲ್ಡ್’ ವರದಿ ಮಾಡಿದೆ.

ಮುಹಮ್ಮದ್ ಸಿರಾಜ್ ಹಾಗೂ ಜಸ್‌ಪ್ರೀತ್ ಬುಮ್ರಾ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದಿದ್ದ 3ನೇ ಟೆಸ್ಟ್‌ನಲ್ಲಿ ಜನಾಂಗೀಯ ನಿಂದನೆ ಎದುರಿಸಿದ್ದರು. ಸಿಡ್ನಿ ಘಟನೆಯ ಬಳಿಕ ಆಸೀಸ್ ಪ್ರೇಕ್ಷಕರು ಉದ್ದೇಶಪೂರ್ವಕವಾಗಿಯೇ ಸಿರಾಜ್ ಅವರನ್ನು ಗುರಿಯಾಗಿಸುತ್ತಿದ್ದಾರೆ. ಇದೀಗ ಗಾಬಾದಲ್ಲೂ ಇದು ಮುಂದುವರಿದಿದ್ದು, ಸದ್ಯಕ್ಕೆ ಟೀಮ್ ಇಂಡಿಯಾ ಆಟಗಾರರಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News