ನೂತನ ಸಂಸತ್ ಭವನ ನಿರ್ಮಾಣ ಕಾಮಗಾರಿ ಆರಂಭ

Update: 2021-01-15 17:25 GMT

ಹೊಸದಿಲ್ಲಿ, ಜ.15: ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಸೆಂಟ್ರಲ್ ವಿಸ್ತ ಪುನರಾಭಿವೃದ್ಧಿ ಯೋಜನೆಯಡಿ ನಿರ್ಮಾಣವಾಗಲಿರುವ ನೂತನ ಸಂಸತ್ ಭವನದ ಕಾಮಗಾರಿಗೆ ಶುಕ್ರವಾರ ಚಾಲನೆ ದೊರಕಿದೆ. ಕಳೆದ ವರ್ಷದ ಡಿಸೆಂಬರ್ 10ರಂದು ಪ್ರಧಾನಿ ಮೋದಿ ಸಂಸತ್ ಭವನದ ಶಿಲಾನ್ಯಾಸ ನೆರವೇರಿಸಿದ್ದರು. ನೂತನ ಸಂಸತ್ ಭವನ ಮತ್ತು ಸೆಂಟ್ರಲ್ ವಿಸ್ತ ಪುನರಾಭಿವೃದ್ಧಿ ಯೋಜನೆಗೆ ಈ ವಾರ 14 ಸದಸ್ಯರ ಸಮಿತಿ ಅನುಮೋದನೆ ನೀಡಿದೆ. ಕಾಮಗಾರಿ ಆರಂಭಕ್ಕೂ ಮುನ್ನ ಸಮಿತಿ ಹಾಗೂ ಸಂಬಂಧಿತ ಪ್ರಾಧಿಕಾರಗಳ ಅನುಮತಿ ಪಡೆಯುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರಕಾರಕ್ಕೆ ಸೂಚಿಸಿತ್ತು.

ಸುಮಾರು 971 ಕೋಟಿ ರೂ. ಅಂದಾಜು ವೆಚ್ಚದ ಈ ಯೋಜನೆಯ ಕಾಮಗಾರಿಯ ಗುತ್ತಿಗೆಯನ್ನು ಟಾಟಾ ಪ್ರೊಜೆಕ್ಟ್ಸ್ ಸಂಸ್ಥೆ ಪಡೆದಿದೆ. ನಿರ್ಮಾಣ ಕಾಮಗಾರಿಗೆ 35 ದಿನದ ಬಳಿಕ ಚಾಲನೆ ಸಿಕ್ಕಿದ್ದರೂ ನಿಗದಿತ ಸಮಯ ಅಥವಾ ಅದಕ್ಕಿಂತಲೂ ಮೊದಲೇ ಕಾಮಗಾರಿ ಪೂರ್ಣಗೊಳಿಸಲಾಗುವುದು. ನಿಪುಣ ಮಾನವ ಸಂಪನ್ಮೂಲ, ಕಚ್ಛಾ ಸಾಮಗ್ರಿಗಳನ್ನು ಈಗಾಗಲೇ ಸಂಗ್ರಹಿಸಲಾಗಿದೆ ಎಂದು ಟಾಟಾ ಸಂಸ್ಥೆ ಹೇಳಿದೆ. 94 ವರ್ಷದ ಹಿಂದೆ 83 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಈಗಿನ ಸಂಸತ್ ಭವನದ ಮುಂಭಾಗದಲ್ಲಿ ಹೊಸ ಭವನ ನಿರ್ಮಾಣಗೊಳ್ಳಲಿದೆ. ಹೊಸ ಭವನ ಪೂರ್ಣಗೊಂಡ ಬಳಿಕ ಈಗಿನ ಸಂಸತ್ ಭವನವನ್ನು ಮ್ಯೂಸಿಯಂ ಆಗಿ ಪರಿವರ್ತಿಸಲಾಗುತ್ತದೆ. ಹೊಸ ಸಂಸತ್ ಭವನದಲ್ಲಿ 888 ಆಸನ ಸಾಮರ್ಥ್ಯದ ಲೋಕಸಭೆ, 384 ಆಸನ ಸಾಮರ್ಥ್ಯದ ರಾಜ್ಯಸಭೆ ಮತ್ತು ಜಂಟಿ ಅಧಿವೇಶನ ನಡೆಸಲು 1,272 ಆಸನ ಸಾಮರ್ಥ್ಯದ ವಿಶಾಲ ಸಭಾಂಗಣವಿರುತ್ತದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News