ನಮ್ಮ ತಾಳ್ಮೆ ಪರೀಕ್ಷಿಸುವ ತಪ್ಪು ಮಾಡಬೇಡಿ: ಚೀನಾಕ್ಕೆ ಸೇನಾ ಮುಖ್ಯಸ್ಥ ನರವಣೆ ಸಂದೇಶ

Update: 2021-01-15 18:19 GMT

ಹೊಸದಿಲ್ಲಿ, ಜ.15: ದೇಶದ ಉತ್ತರ ಗಡಿಯಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಮಾತುಕತೆ ಮತ್ತು ರಾಜತಾಂತ್ರಿಕ ಮಾರ್ಗಗಳಿಂದ ಪರಿಹರಿಸಲು ಭಾರತ ಬದ್ಧವಾಗಿದೆ. ಆದರೆ ಯಾರೊಬ್ಬರೂ ನಮ್ಮ ತಾಳ್ಮೆಯನ್ನು ಪರೀಕ್ಷಿಸುವ ತಪ್ಪು ಮಾಡಬಾರದು ಎಂದು ಸೇನಾ ಮುಖ್ಯಸ್ಥ ಎಂಎಂ ನರವಣೆ ಚೀನಾಕ್ಕೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

73ನೇ ಸೇನಾ ದಿನದ ಅಂಗವಾಗಿ ಶುಕ್ರವಾರ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೈನಿಕರನ್ನುದ್ದೇಶಿಸಿ ಮಾತನಾಡಿದ ಅವರು, ಗಡಿಯಲ್ಲಿ ಏಕಪಕ್ಷೀಯ ಬದಲಾವಣೆ ಮಾಡಲು ಸಂಚು ಹೂಡಿದವರಿಗೆ ಮುಟ್ಟಿ ನೋಡಿಕೊಳ್ಳುವಂತಹ ಪ್ರಹಾರ ನೀಡಿದ್ದೇವೆ. ಪೂರ್ವ ಲಡಾಖ್‌ನ ಗಲ್ವಾನ್‌ನಲ್ಲಿ ಯೋಧರ ಬಲಿದಾನ ವ್ಯರ್ಥವಾಗದು. ದೇಶದ ಸಮಗ್ರತೆ ಮತ್ತು ಸಾರ್ವಭೌಮತ್ವಕ್ಕೆ ಯಾವುದೇ ಹಾನಿಯಾಗಲು ಭಾರತದ ಸೇನೆ ಅವಕಾಶ ನೀಡುವುದಿಲ್ಲ ಎಂದು ನರವಣೆ ಹೇಳಿದರು.

 ಗಡಿಯಲ್ಲಿ ಸಹಜಸ್ಥಿತಿ ನೆಲೆಸುವಂತಾಗಲು ಭಾರತ-ಚೀನಾ ಮಧ್ಯೆ ಈಗಾಗಲೇ 8 ಸುತ್ತಿನ ಮಾತುಕತೆ ಹಾಗೂ ರಾಜಕೀಯ ಪ್ರಯತ್ನಗಳನ್ನು ನಡೆಸಲಾಗಿದೆ. ಬಿಕ್ಕಟ್ಟಿನ ಪರಿಸ್ಥಿತಿಯನ್ನು ಬಗೆಹರಿಸಲು ಪರಸ್ಪರ ಮತ್ತು ಸಮಾನ ಭದ್ರತೆಯ ಆಧಾರದಲ್ಲಿ ಪರಿಹರಿಸಲು ನಮ್ಮ ಪ್ರಯತ್ನ ಮುಂದುವರಿದಿದೆ ಎಂದರು.

ಪಾಕಿಸ್ತಾನವನ್ನು ಉಲ್ಲೇಖಿಸಿದ ನರವಣೆ, ಇನ್ನೊಂದು ಗಡಿಯಲ್ಲಿ ನಮ್ಮ ನೆರೆದೇಶ ಭಯೋತ್ಪಾದನೆಗೆ ನೆರವು ನೀಡಿ ಭಯೋತ್ಪಾದಕರನ್ನು ಪೋಷಿಸುತ್ತಿದೆ. ನೆರೆದೇಶದ ನೆಲದಲ್ಲಿರುವ ತರಬೇತಿ ಶಿಬಿರಗಳಲ್ಲಿ ತರಬೇತಿ ಪಡೆದಿರುವ ಸುಮಾರು 400 ಭಯೋತ್ಪಾದಕರು ದೇಶದ ಒಳನುಸುಳಲು ಕಾಯುತ್ತಿದ್ದಾರೆ. ಪಾಕಿಸ್ತಾನಕ್ಕೆ ಈಗಾಗಲೇ ಹಲವು ಬಾರಿ ಕಠಿಣ ಉತ್ತರ ನೀಡಿದ್ದೇವೆ. ಕಳೆದ ವರ್ಷ ಪಾಕ್‌ನಿಂದ ಕದನವಿರಾಮ ಉಲ್ಲಂಘನೆಯ ಪ್ರಕರಣದಲ್ಲಿ 40% ಹೆಚ್ಚಳವಾಗಿದೆ. ಡ್ರೋನ್ ಮೂಲಕ ದೇಶದೊಳಗೆ ಶಸ್ತ್ರಾಸ್ತ್ರ ಕಳ್ಳಸಾಗಣೆ ಮಾಡಲೂ ಪ್ರಯತ್ನಿಸಲಾಗಿದೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News