ಪ್ಯಾಸೆಂಜರ್ ರೈಲು ಸೇವೆ ಆರಂಭ ಯಾವಾಗ?

Update: 2021-01-18 17:37 GMT

ಮಾನ್ಯರೇ,
 ಲಾಕ್‌ಡೌನ್ ಕಾಲದಲ್ಲಿ ಸ್ಥಗಿತಗೊಂಡಿದ್ದ ರೈಲು ಸೇವೆಗಳಲ್ಲಿ ಕೆಲವನ್ನು ಇನ್ನೂ ಆರಂಭಿಸಲಾಗಿಲ್ಲ. ಮುಖ್ಯವಾಗಿ ಪ್ಯಾಸೆಂಜರ್ ರೈಲುಗಳು ಇನ್ನು ಕೂಡ ಕಾರ್ಯಾ ರಂಭಿಸದ ಕಾರಣ ಅದರ ಬಳಕೆದಾರರು ಈಗಲೂ ಸಂತ್ರಸ್ತರೇ ಆಗಿದ್ದಾರೆ. ಕೊರೋನದ ಹಾವಳಿ ಕಡಿಮೆಯಾಗಿರುತ್ತಾ, ಶಾಲಾ-ಕಾಲೇಜು, ಅಂಗಡಿ, ಸಿನೆಮಾ ಥಿಯೇಟರ್‌ಗಳೆಲ್ಲವೂ ತೆರೆಯಲ್ಪಟ್ಟಿದ್ದು, ಬಸ್ಸುಗಳಲ್ಲಿ ಪ್ರಯಾಣಿಕರು ಒತ್ತೊತ್ತಾಗಿ ತುಂಬಿಕೊಂಡು ಯಾವುದೇ ಅಳುಕಿಲ್ಲದೆ ಪ್ರಯಾಣಿಸುತ್ತಿರುವುದು ಸಾಮಾನ್ಯವಾಗಿದ್ದರೂ, ಪ್ಯಾಸೆಂಜರ್ ರೈಲುಗಳನ್ನು ಮಾತ್ರ ಆರಂಭಿಸದಿರಲು ಕಾರಣವೇನೋ ತಿಳಿಯುತ್ತಿಲ್ಲ. ರೈಲುಗಳನ್ನು ಖಾಸಗೀಕರಣಗೊಳಿಸುವ ಯೋಚನೆಗಳಿಗೂ ಈ ವಿಳಂಬಕ್ಕೂ ಕಾರಣಗಳಿರಬಹುದೇ?
ಮಂಗಳೂರಿಗೆ ಕೇರಳದ ಕಡೆಯಿಂದ ನಿತ್ಯ ಪ್ರಯಾಣಿಸುವ ಸಾವಿರಾರು ಮಂದಿ ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ ಒಂದೇ ಒಂದು ರೈಲು ಲಭ್ಯವಿಲ್ಲ. ಅದೇ ರೀತಿ ಪುತ್ತೂರು ಕಡೆಯ ಜನರಿಗೂ ಪ್ಯಾಸೆಂಜರ್ ರೈಲುಗಳಿಲ್ಲದೆ ತೊಡಕಾಗಿದೆ. ಗುಜರಾತಿನ ಕೆವಾಡಿಯಾ ಎಂಬ ಊರಿಗೆ ಒಂದೇ ದಿನ ದೇಶದ ಬೇರೆ ಬೇರೆ ಕಡೆಗಳಿಂದ ಎಂಟು ಹೊಸ ರೈಲುಗಳನ್ನು ಆರಂಭಿಸಲು ಕೇಂದ್ರ ಸರಕಾರಕ್ಕೆ ಸಾಧ್ಯವಿರುವುದಾದರೆ, ಸ್ಥಗಿತಗೊಂಡಿರುವ ಪ್ಯಾಸೆಂಜರ್ ರೈಲುಗಳನ್ನು ಪುನರಾರಂಭಿಸಲು ಇರುವ ಅಡ್ಡಿ ಯಾವುದು? ಉದ್ಯೋಗಕ್ಕೆ, ವಿದ್ಯಾಭ್ಯಾಸಕ್ಕೆ ನಿತ್ಯ ಪ್ರಯಾಣಿಸಬೇಕಾದ ಜನಸಾಮಾನ್ಯರಿಗಿಂತ ಗುಜರಾತಿಗೆ ಪ್ರಯಾಣಿಸಬೇಕಾದ ಪ್ರವಾಸಿಗಳಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡುವ ಕೇಂದ್ರ ಸರಕಾರದ ಧೋರಣೆಯ ಹಿಂದಿನ ಯೋಚನೆಯೇನೆಂದು ಅರ್ಥವಾಗುವುದಿಲ್ಲ.
 

Writer - -ಕೆ. ಎಸ್. ಮಂಗಳೂರು

contributor

Editor - -ಕೆ. ಎಸ್. ಮಂಗಳೂರು

contributor

Similar News