ಅರ್ನಬ್ ಗೋಸ್ವಾಮಿ ಚಾನೆಲ್‌ನ ಮತ್ತೊಂದು ಅಕ್ರಮ ಬಯಲು : ಇತರ ಚಾನಲ್‌ ಗಳಿಂದ ದೂರು

Update: 2021-01-21 06:24 GMT

ಮುಂಬೈ : ಅರ್ನಬ್ ಗೋಸ್ವಾಮಿ ರಿಪಬ್ಲಿಕ್ ಟಿವಿ ಚಾನಲ್ ಆರಂಭಿಸಿದ ದಿನದಿಂದ ಅಂದರೆ 2017ರಿಂದಲೂ, ಸರ್ಕಾರಕ್ಕೆ ನಯಾ ಪೈಸೆ ಪಾವತಿಸದೇ ಪ್ರಸಾರ ಭಾರತಿ ಮಾಲಕತ್ವದ ಡಿಡಿ ಫ್ರೀಡಿಶ್ ಡೈರೆಕ್ಟ್ ಟು ಹೋಮ್ (ಡಿಟಿಎಚ್) ಸೇವೆಯನ್ನು ಅಕ್ರಮವಾಗಿ ಬಳಸಿಕೊಂಡು ಹೆಚ್ಚುವರಿ 22 ದಶಲಕ್ಷ ಬಳಕೆದಾರರನ್ನು ತಲುಪಿರುವ ಮತ್ತೊಂದು ಹಗರಣ ಬೆಳಕಿಗೆ ಬಂದಿದೆ ಎಂದು ವರದಿಯಾಗಿದೆ.

ಸಾಮಾನ್ಯವಾಗಿ ಹರಾಜಿನ ಮೂಲಕ ಈ ಸೇವೆಯನ್ನು ಬಳಸಿಕೊಳ್ಳಬೇಕಾದರೆ ಖಾಸಗಿ ಚಾನಲ್‌ಗಳು 8-12 ಕೋಟಿ ರೂ. ವಾರ್ಷಿಕವಾಗಿ ಪಾವತಿಸಬೇಕಾಗುತ್ತದೆ. ಆದರೆ ಗೋಸ್ವಾಮಿಯ ಇಂಗ್ಲಿಷ್ ಸುದ್ದಿವಾಹಿನಿಯ ಪ್ರಸಾರವನ್ನು ಎರಡು ವರ್ಷಗಳಿಗೂ ಅಧಿಕ ಅವಧಿಗೆ ಫ್ರೀ ಡಿಶ್ ಸೇವೆಯ ಎಲ್ಲ ಬಳಕೆದಾರರಿಗೆ ಅನ್‌ಎನ್‌ಕ್ರಿಪ್ಟೆಡ್ ರೀತಿಯಲ್ಲಿ ಪ್ರಸಾರ ಮಾಡಲಾಗಿದೆ. ಸರ್ಕಾರಿ ಬೊಕ್ಕಸಕ್ಕೆ ನಷ್ಟವಾಗುತ್ತಿರುವ ಹಾಗೂ ನ್ಯಾಯಸಮ್ಮತವಲ್ಲದ ರೀತಿಯಲ್ಲಿ ರಿಪಬ್ಲಿಕ್ ಟಿವಿ ಈ ಸೌಲಭ್ಯದ ಪ್ರಯೋಜನ ಪಡೆಯುತ್ತಿರುವ ಬಗ್ಗೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಇತರ ಪ್ರತಿ ಸ್ಪರ್ಧಿ ಚಾನಲ್‌ಗಳು ದೂರು ನೀಡಿದ್ದವು.

ಇದನ್ನು ಪ್ರಸಾರ ಭಾರತಿಗೆ ಸಚಿವಾಲಯ ನೀಡಿತ್ತು. ಆದಾಗ್ಯೂ ಖಾಸಗಿ ಡಿಟಿಎಚ್ ಡಿಶ್ ಟಿವಿ ಮತ್ತು ರಿಪಬ್ಲಿಕ್ ಟಿವಿ ನಡುವೆ ಪ್ರಸಾರದ ಒಪ್ಪಂದ ಏರ್ಪಡುವ ವರೆಗೆ ಅಂದರೆ 2019ರ ಸೆಪ್ಟೆಂಬರ್ ವರೆಗೂ ಇದು ಮುಂದುವರಿದಿದೆ. ರಿಪಬ್ಲಿಕ್ ಟಿವಿ ಇದೀಗ ಡಿಶ್ ಟಿವಿ ಸೇರಿದಂತೆ ಜಿಸ್ಯಾಟ್15 ಉಪಗ್ರಹದ ಬ್ಯಾಂಡ್‌ವಿಡ್ತ್ ಬಳಸುವ ಕೆಲ ಖಾಸಗಿ ಡಿಟಿಎಚ್ ಸಂಸ್ಥೆಗಳ ಜತೆ ತಮ್ಮ ಕಾರ್ಯಕ್ರಮಗಳ ಪ್ರಸಾರಕ್ಕೆ ಒಪ್ಪಂದ ಮಾಡಿಕೊಂಡಿದೆ. ಡಿಡಿ ಫ್ರೀಡಿಶ್ ಕೂಡಾ ಜಿಸ್ಯಾಟ್15 ಬಳಸಿಕೊಳ್ಳುವ ಹಿನ್ನೆಲೆಯಲ್ಲಿ ಡಿಶ್ ಟಿವಿಯ ಬ್ಯಾಂಡ್‌ವಿಡ್ತ್ ಕೂಡಾ ಡಿಡಿ ಫ್ರೀ ಡಿಶ್‌ನ ಬ್ಯಾಂಡ್‌ವಿಡ್ತ್ ಜತೆಗೆ ಇದೆ. ಇದರ ಪರಿಣಾಮವಾಗಿ ಡಿಶ್ ಟಿವಿ ಬಳಕೆದಾರರು ಫ್ರೀಡಿಶ್‌ನಲ್ಲಿ ಲಭ್ಯವಿರುವ ಎಲ್ಲ ಎಫ್‌ಟಿಎ (ಫ್ರೀ ಟೂ ಏರ್) ಚಾನಲ್‌ಗಳನ್ನು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೇ ವೀಕ್ಷಿಸಲು ಅವಕಾಶವಾಗಿತ್ತು.

ಆದರೆ ಡಿಡಿ ಫ್ರೀಡಿಶ್ ಗ್ರಾಹಕರು ಡಿಶ್ ಟಿವಿ ಚಾನಲ್‌ಗಳನ್ನು ಡೌನ್‌ಲಿಂಕ್ ಮಾಡಿಕೊಳ್ಳಲು ಅವಕಾಶವಿರಲಿಲ್ಲ. ಏಕೆಂದರೆ ಪಾವತಿ ಚಾನಲ್‌ಗಳನ್ನು ಎನ್‌ಕ್ರಿಪ್ಟೆಡ್ ವಿಧಾನದಲ್ಲಿ ಅಪ್‌ಲಿಂಕ್ ಮಾಡಲಾಗುತ್ತಿತ್ತು. ಆದಾಗ್ಯೂ ರಿಪಬ್ಲಿಕ್ ಟಿವಿ ಮಾತ್ರ ತನ್ನ ಕಾರ್ಯಕ್ರಮಗಳನ್ನು ಅನ್‌ಎನ್‌ಕ್ರಿಪ್ಟೆಡ್ ವಿಧಾನದಲ್ಲಿ ಅಪ್‌ಲಿಂಕ್ ಮಾಡುತ್ತಿತ್ತು. ಈ ಅಕ್ರಮದಿಂದ ಬೊಕ್ಕಸಕ್ಕೆ ದೊಡ್ಡ ಪ್ರಮಾಣದ ನಷ್ಟವಾಗದಿದ್ದರೂ (ಅಂದಾಜು 25 ಕೋಟಿ) ಚಾನಲ್ ಹೆಚ್ಚುವರಿ ವೀಕ್ಷಕರನ್ನು ಪಡೆಯಲು ಇದು ನೆರವಾಗಿದೆ ಎಂದು ಮಾಧ್ಯಮ ಗ್ರಾಹಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಈ ಆರೋಪಗಳಿಗೆ ಪ್ರತಿಕ್ರಿಯಿಸಿದ ಪ್ರಸಾರ ಭಾರತಿ, "ರಿಪಬ್ಲಿಕ್ ಟಿವಿ ಮತ್ತು ಡಿಶ್ ಟಿವಿ ಸ್ಪರ್ಧೆಯನ್ನು ದುರ್ಬಲಗೊಳಿಸುತ್ತಿದೆ ಮತ್ತು ಡಿಡಿ ಫ್ರೀಡಿಶ್ ಸ್ಲಾಟ್‌ಗಳ ಹರಾಜು ಪ್ರಕ್ರಿಯೆಯನ್ನು ಸೋಲಿಸುತ್ತಿದೆ ಎಂದು ಹೇಳಿತ್ತು. ಬಳಿಕ ರಿಪಬ್ಲಿಕ್ ಟಿವಿ ಅಕ್ರಮವಾಗಿ ಫ್ರೀಡಿಶ್ ಸೇವೆ ಬಳಸಿಕೊಳ್ಳುತ್ತಿರುವ ಬಗ್ಗೆ ವಿಚಾರಿಸಿ ಡಿಶ್ ಟಿವಿಗೆ ಪತ್ರ ಬರೆದಿತ್ತು. 2019ರ ಸೆಪ್ಟೆಂಬರ್‌ನಲ್ಲಿ ಇದಕ್ಕೆ ಉತ್ತರಿಸಿದ ಡಿಶ್ ಟಿವಿ ಸರ್ಕಾರದ ನಿರ್ದೇಶನದ ಅನ್ವಯ ಎಲ್ಲ ಚಾನಲ್ ಹಾಗೂ ಸೇವೆಗಳನ್ನು ಎನ್‌ಕ್ರಿಪ್ಟ್ ಮಾಡಲಾಗಿದ್ದು, ಇದು ಎಲ್ಲ ಅಗತ್ಯತೆಗಳಿಗೆ ಬದ್ಧವಾಗಿದೆ ಎಂದು ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News