ತೈಲಬೆಲೆಯೇರಿಕೆಗೆ ನಿಯಂತ್ರಣವಿಲ್ಲವೇ?

Update: 2021-01-21 17:54 GMT

ಮಾನ್ಯರೇ,

ಪೆಟ್ರೋಲ್, ಡೀಸೆಲ್ ಬೆಲೆಗಳು ದಿನದಿಂದ ದಿನಕ್ಕೆ ಏರುತ್ತಿದ್ದು, ಜನಸಾಮಾನ್ಯರಿಗೆ ಕೈಗೆಟುಕಲಾರದಷ್ಟು ಮೇಲೇರುತ್ತಿವೆ. ತೈಲ ಬೆಲೆ ಏರಿಕೆಯ ಪರಿಣಾಮವಾಗಿ ವಾಹನ ಬಳಕೆದಾರರು ಕಂಗೆಟ್ಟಿದ್ದರೆ, ಈ ಏರಿಕೆಯಿಂದಾಗಿ ದಿನಬಳಕೆಯ ವಸ್ತುಗಳಿಂದ ಹಿಡಿದು ಎಲ್ಲವೂ ತುಟ್ಟಿಯಾಗಿದ್ದು ಇದರ ನೇರ ಪರಿಣಾಮ ಬಡ ಜನಸಾಮಾನ್ಯರಿಗೆ ತಟ್ಟುತ್ತಿದೆ. ತೈಲ ಬೆಲೆ ಏರಿಕೆಯ ಅವಾಂತರವನ್ನು ಪ್ರಶ್ನಿಸುವವರೇ ಇಲ್ಲವಾಗಿದ್ದಾರೆ.
ದೇಶದ ಜನರಲ್ಲಿ ಏನೇನೋ ಭರವಸೆ ಹುಟ್ಟಿಸಿ ಮತ ಪಡೆದು ಇದೀಗ ದೇಶದ ಅಭಿವೃದ್ಧಿ ಮರೆತು ಕೇವಲ ಕೋಮು ರಾಜಕೀಯದಲ್ಲೇ ಮಗ್ನರಾಗಿರುವ ಸರಕಾರದ ಮೇಲೆ ಜನತೆ ವಿಶ್ವಾಸ ಕಳೆದುಕೊಂಡಿದ್ದಾರೆ. ತೈಲ ಬೆಲೆ ಏರಿಕೆಯನ್ನು ಪ್ರಶ್ನಿಸಬೇಕಾದ ವಿರೋಧ ಪಕ್ಷಗಳು ಕೂಡಾ ಧ್ವನಿ ಕಳೆದುಕೊಂಡಿವೆ.
ಪಕ್ಷವೊಂದಕ್ಕೆ ಚುನಾವಣೆಯಲ್ಲಿ ಅತಿಯಾದ ಬಹುಮತ ಕೊಟ್ಟರೆ ಅದರ ಪರಿಣಾಮ ದೇಶದ ಮೇಲೆ ಯಾವ ರೀತಿಯಲ್ಲಿ ದುಷ್ಪರಿಣಾಮ ಬೀರಬಹುದೆಂಬುದಕ್ಕೆ ತೈಲಬೆಲೆ ಏರಿಕೆಯೊಂದನ್ನೇ ಉದಾಹರಿಸಬಹುದು.

 ನೋಟು ಅಮಾನ್ಯ, ಜಿಎಸ್‌ಟಿಯಿಂದ ಮೊದಲೇ ತತ್ತರಿಸುತ್ತಿದ್ದ ಜನಸಾಮಾನ್ಯರಿಗೆ ಕೊರೋನ ಮತ್ತಷ್ಟು ಸಂಕಷ್ಟ ನೀಡಿದೆ. ಈಗ ಈ ನಿಲ್ಲದ ತೈಲಬೆಲೆಯೇರಿಕೆ ಬಡವರನ್ನು ಮತ್ತೆ ಮೇಲೇಳದಂತೆ ಮಾಡುವುದಂತೂ ನಿಶ್ಚಿತ. ಈ ಸಂಕಷ್ಟ ಸಮಯದಲ್ಲಿ ಜನರನ್ನು ಕಾಪಾಡುವವರು ಯಾರು? 

Similar News