ಮಿಷನ್ ಮೆಲ್ಬರ್ನ್ ಗೆ ಕಾರಣವಾದ ವಿರಾಟ್ ಕೊಹ್ಲಿಯ ಮಧ್ಯರಾತ್ರಿಯ ಫೋನ್ ಕರೆ

Update: 2021-01-23 06:46 GMT

ಹೊಸದಿಲ್ಲಿ,ಜ.23: ಟೀಂ ಇಂಡಿಯಾದ ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್ ತಮಗೆ ಆಸ್ಟ್ರೇಲಿಯಾದಲ್ಲಿರುವಾಗ ವಿರಾಟ್ ಕೊಹ್ಲಿಯಿಂದ ಮಧ್ಯರಾತ್ರಿ ಬಂದ ಅಚ್ಚರಿಯ ಕರೆ ಹಾಗೂ ಆ ಸಂದರ್ಭ ನಡೆದ ಚರ್ಚೆಗಳ ಕುರಿತಾದ ಕೆಲ ಕುತೂಹಲಕಾರಿ ಮಾಹಿತಿಗಳನ್ನು ಹೊರಗೆಡಹಿದ್ದಾರೆ.

ರವಿಚಂದ್ರನ್ ಅಶ್ವಿನ್ ಅವರ ಯೂಟ್ಯೂಬ್ ಚಾನೆಲ್ ಜತೆ ಮಾತನಾಡಿದ ಶ್ರೀಧರ್, "ಆಗ  ಮಧ್ಯರಾತ್ರಿ 12.30 ಆಗಿರಬೇಕು. ನಾವು ಅಡಿಲೇಡ್ ಟೆಸ್ಟ್ ಸೋತ ರಾತ್ರಿಯಾಗಿತ್ತು. ವಿರಾಟ್ ಕೊಹ್ಲಿ ನನಗೆ ಮೆಸೇಜ್ ಮಾಡಿ "ಏನು ಮಾಡುತ್ತಿದ್ದೀರಿ?" ಎಂದು ಕೇಳಿದರು. ನನಗೆ ಶಾಕ್ ಆಯಿತು. ಈ ಹೊತ್ತಿನಲ್ಲಿ ಏಕೆ ಮೆಸೇಜ್ ಮಾಡುತ್ತಿದ್ದಾರೆಂದು ಯೋಚಿಸಿದೆ. ಮುಖ್ಯ ಕೋಚ್ (ರವಿ ಶಾಸ್ತ್ರಿ), ನಾನು, ಭರತ್ ಅರುಣ್ ಹಾಗೂ ವಿಕ್ರಮ್ ರಾಥೋರ್ ಜತೆಯಾಗಿ ಕುಳಿತಿದ್ದೇವೆ" ಎಂದು ಹೇಳಿದೆ. ಆಗ ಅವರು "ನಾನು ಕೂಡ ನಿಮ್ಮ ಜತೆ ಸೇರುತ್ತೇನೆ" ಎಂದರು. ಅದಕ್ಕೆ ನಾನು "ಸಮಸ್ಯೆಯಿಲ್ಲ, ಬನ್ನಿ" ಎಂದೆ.

"ನಂತರ ಅವರು ನಮ್ಮ ಜತೆ ಸೇರಿ ನಾವು ಚರ್ಚಿಸತೊಡಗಿದೆವು. ಆಗ ʼಮಿಷನ್ ಮೆಲ್ಬೋರ್ನ್ʼ ಆರಂಭಗೊಂಡಿತ್ತು. ಆಗ ಶಾಸ್ತ್ರಿ, "ಇದು 36, ಅದನ್ನು ಒಂದು ಬ್ಯಾಡ್ಜ್‌ ನಂತೆ ಧರಿಸಿ. ಈ 36 ಈ ತಂಡವನ್ನು ಮಹಾನ್ ಆಗಿಸಲಿದೆ" ಎಂದು ಹೇಳಿದರೆಂದು ಶ್ರೀಧರ್ ವಿವರಿಸಿದ್ದಾರೆ.

ಮೊದಲ ಟೆಸ್ಟ್ ನಲ್ಲಿ ಭಾರತ ತಂಡ 36ಗೆ ಆಲ್ ಔಟ್ ಆದ ಸಂದರ್ಭ ಕೊಹ್ಲಿ ಗರಿಷ್ಠ ರನ್ ಗಳಿಸಿದವರಾಗಿದ್ದರು. ಆದರೆ ನಂತರ ಅವರು ಭಾರತಕ್ಕೆ ಮರಳಿದ್ದರು.

"ಸರಣಿಯ ಉಳಿದ ಭಾಗದಲ್ಲಿ ಭಾರತದ ತಂತ್ರಗಾರಿಕೆ ಏನಾಗಬೇಕೆಂಬ ಕುರಿತು ಕೊಹ್ಲಿ ಹಾಗೂ ರಹಾನೆ ಚರ್ಚಿಸಿದರು.  36ಕ್ಕೆ ಆಲೌಟ್ ಆದಾಗ ತಂಡಗಳು ಸಾಮಾನ್ಯವಾಗಿ ಬ್ಯಾಟಿಂಗ್ ಬಲ ಪಡಿಸುವ ಬಗ್ಗೆ ಯೋಚಿಸುತ್ತವೆ ಆದರೆ ನಾವು  ಜತೆಯಾಗಿ ಕುಳಿತು ಬೌಲಿಂಗ್ ಬಲಪಡಿಸುವ ಬಗ್ಗೆ ಚರ್ಚಿಸಿದೆವು.  ಇದೇ ಕಾರಣಕ್ಕೆ ವಿರಾಟ್ ಸ್ಥಾನಕ್ಕೆ ರವೀಂದ್ರ ಜಡೇಜಾ ಅವರನ್ನು ತಂದೆವು,. ಅದೊಂದು ಮಾಸ್ಟರ್ ಸ್ಟ್ರೋಕ್ ಆಯಿತು" ಎಂದು ಶ್ರೀಧರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News