ಭಾರತ-ಚೀನಾ ಸಂಬಂಧ ತೀವ್ರವಾಗಿ ಹದಗೆಟ್ಟಿದೆ: ವಿದೇಶ ಸಚಿವ ಎಸ್ ಜೈಶಂಕರ್
ಹೊಸದಿಲ್ಲಿ, ಜ.28: ಭಾರತ-ಚೀನಾ ನಡುವಿನ ಸಂಬಂಧ ಈಗ ನಿಜವಾಗಿಯೂ ಕವಲುದಾರಿಯಲ್ಲಿದೆ. ಈ ಹಂತದಲ್ಲಿ ಕೈಗೊಳ್ಳುವ ಆಯ್ಕೆಯು ಉಭಯ ರಾಷ್ಟ್ರಗಳ ಮೇಲೆ ಮಾತ್ರವಲ್ಲ, ಇಡೀ ವಿಶ್ವದ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ವಿದೇಶ ವ್ಯವಹಾರ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ. ಭಾರತ-ಚೀನಾ ಸಂಬಂಧಗಳ ವಿಷಯದಲ್ಲಿ ಆನ್‌ಲೈನ್ ಮೂಲಕ ನಡೆದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಪೂರ್ವ ಲಡಾಕ್‌ನಲ್ಲಿ ನಡೆದ ಘಟನೆಗಳು ಉಭಯ ರಾಷ್ಟ್ರಗಳ ನಡುವಿನ ಸಂಬಂಧವನ್ನು ತೀವ್ರವಾಗಿ ಹದಗೆಡಿಸಿವೆ. ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಯಥಾಸ್ಥಿತಿ ಬದಲಿಸುವ ಯಾವುದೇ ಪ್ರಯತ್ನ ಖಂಡಿತಾ ಸ್ವೀಕಾರಾರ್ಹವಲ್ಲ ಎಂದರು.
ಪೂರ್ವ ಲಡಾಕ್‌ನಲ್ಲಿ ಚೀನಾದ ಕೃತ್ಯವು ಸೇನಾಬಲವನ್ನು ಕಡಿಮೆಗೊಳಿಸುವ ಬದ್ಧತೆಯ ಕಡೆಗಣನೆಯಷ್ಟೇ ಅಲ್ಲ, ಈ ಪ್ರದೇಶದಲ್ಲಿ ಶಾಂತಿ ಮತ್ತು ನೆಮ್ಮದಿಗೆ ಭಂಗ ತರುವ ಧೋರಣೆಯ ಪ್ರತೀಕವಾಗಿದೆ. ಚೀನಾದ ಬದಲಾದ ನಿಲುವು ಹಾಗೂ ಗಡಿಭಾಗದಲ್ಲಿ ಸೇನೆಯ ಜಮಾವಣೆ ಕುರಿತು ಇದುವರೆಗೂ ನಮಗೆ ಯಾವುದೇ ವಿಶ್ವಾಸಾರ್ಹ ವಿವರಣೆ ಸಿಕ್ಕಿಲ್ಲ. ವಾಸ್ತವಿಕ ನಿಯಂತ್ರಣ ರೇಖೆಯ ನಿರ್ವಹಣೆ ಕುರಿತ ಎಲ್ಲಾ ಒಪ್ಪಂದದ ಕಟ್ಟುನಿಟ್ಟಿನ ಪಾಲನೆ, ಪರಸ್ಪರ ಗೌರವ ಮತ್ತು ಸಂವೇದನಾಶೀಲತೆ, ಏಶ್ಯಾದ ಬಲಿಷ್ಟ ರಾಷ್ಟ್ರವಾಗಿ ಬೆಳೆಯಬೇಕೆಂಬ ಪರಸ್ಪರರ ಆಕಾಂಕ್ಷೆಯನ್ನು ಗೌರವಿಸುವುದೂ ಸೇರಿದಂತೆ ಎಂಟು ಪ್ರಮುಖ ಅಂಶಗಳ ಮೂಲಕ ಭಾರತ-ಚೀನಾ ನಡುವಿನ ಸಂಬಂಧವನ್ನು ಸುಧಾರಿಸಬಹುದು ಎಂದು ಜೈಶಂಕರ್ ಹೇಳಿದ್ದಾರೆ.
ಉಭಯ ದೇಶಗಳೂ ಬಹು ಧ್ರುವೀಯ ಜಗತ್ತಿಗೆ (ಸಾಮರ್ಥ್ಯ, ಅಧಿಕಾರ ಬಹು ರಾಷ್ಟ್ರಗಳಲ್ಲಿ ಸಮಾನ ಹಂಚಿಕೆಯಾಗಿರುವ ವ್ಯವಸ್ಥೆ) ಬದ್ಧವಾಗಿದ್ದರೂ, ಏಶ್ಯಾದಲ್ಲೂ ಈ ವ್ಯವಸ್ಥೆಯನ್ನು ಪರಿಗಣಿಸಬೇಕಾಗಿದೆ. ಉಭಯ ದೇಶಗಳಿಗೂ ತಮ್ಮದೇ ಆದ ಹಿತಾಸಕ್ತಿ, ಆದ್ಯತೆ, ಸಮಸ್ಯೆಗಳಿವೆ. ಸಂವೇದನಾಶೀಲತೆಯೂ ಏಕಪಕ್ಷೀಯವಾಗಿರಲು ಸಾಧ್ಯವಿಲ್ಲ. ಪ್ರಮುಖ ದೇಶಗಳ ನಡುವಿನ ಸಂಬಂಧ ಅನುರೂಪವಾಗಿರಬೇಕು. ಉಭಯ ದೇಶಗಳ ನಡುವೆ ಈಗಾಗಲೇ ಇರುವ ಭಿನ್ನಾಭಿಪ್ರಾಯಗಳನ್ನು ಉಪಶಮನಗೊಳಿಸುವುದು ಹಾಗಿರಲಿ, 2020ರಲ್ಲಿ ನಡೆದ ಘಟನಾವಳಿಗಳು ಸಂಬಂಧವನ್ನು ಮತ್ತಷ್ಟು ಬಿಗಡಾಯಿಸಿದೆ. ಗಡಿಭಾಗದಲ್ಲಿ ಶಾಂತಿ ಮತ್ತು ನೆಮ್ಮದಿ ನೆಲೆಸುವುದು ಸಂಬಂಧ ಸುಧಾರಣೆಯ ನಿಟ್ಟಿನಲ್ಲಿ ಪ್ರಮುಖವಾಗಿದೆ. ಸಂಬಂಧ ಸುಧಾರಿಸಬೇಕಿದ್ದರೆ, ಕಳೆದ 3 ದಶಕಗಳ ಪ್ರಕ್ರಿಯೆಗಳನ್ನು ಗಣನೆಗೆ ತೆಗೆದುಕೊಂಡು ಕಾರ್ಯನೀತಿ ರೂಪಿಸುವ ಅಗತ್ಯವಿದೆ ಎಂದು ಜೈಶಂಕರ್ ಅಭಿಪ್ರಾಯ ಪಟ್ಟಿದ್ದಾರೆ.