ಕರಾವಳಿ, ಗಡಿ ಭಾಗದಲ್ಲಿ ಎನ್‌ಸಿಸಿ ಕೆಡೆಟ್‌ಗಳ ನಿಯೋಜನೆ: ಪ್ರಧಾನಿ ಮೋದಿ
ಹೊಸದಿಲ್ಲಿ, ಜ.28: ಸೇನೆಯ ಮೂರೂ ವಿಭಾಗಗಳಿಂದ ತರಬೇತಿ ಪಡೆದಿರುವ 1 ಲಕ್ಷ ಎನ್‌ಸಿಸಿ ಕೆಡೆಟ್‌ಗಳನ್ನು ಕರಾವಳಿ ಹಾಗೂ ಗಡಿಭಾಗದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ದಿಲ್ಲಿಯ ಕಾರಿಯಪ್ಪ ಮೈದಾನದಲ್ಲಿ ಗುರುವಾರ ನಡೆದ ಎನ್‌ಸಿಸಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ‘ಕರಾವಳಿ ಹಾಗೂ ಗಡಿಭಾಗದ ಸುಮಾರು 175 ಜಿಲ್ಲೆಗಳಲ್ಲಿ ಎನ್‌ಸಿಸಿಗೆ ಹೊಸ ಜವಾಬ್ದಾರಿ ವಹಿಸಲಾಗುವುದು ಎಂದು ಕಳೆದ ವರ್ಷದ ಆಗಸ್ಟ್ 15ರಂದು ಘೋಷಿಸಲಾಗಿತ್ತು. ಈಗ ಈ ಘೋಷಣೆ ಕಾರ್ಯರೂಪಕ್ಕೆ ಬರಲಿದೆ. ಸುಮಾರು 1 ಲಕ್ಷ ಎನ್‌ಸಿಸಿ ಕೆಡೆಟ್‌ಗಳನ್ನು ಸೇನೆಯ ಮೂರೂ ವಿಭಾಗ ತರಬೇತುಗೊಳಿಸಿದೆ. ಇದರಲ್ಲಿ ಮೂರನೇ ಒಂದು ಭಾಗದಷ್ಟು ಮಹಿಳೆಯರು’ ಎಂದು ಹೇಳಿದರು.
ಪ್ರವಾಹ, ಭೂಕುಸಿತದಂತಹ ಪ್ರಾಕೃತಿಕ ವಿಕೋಪದ ಸಂದರ್ಭವಾಗಿರಲಿ, ಕೊರೋನ ಸೋಂಕಿನಂತಹ ಸಾಂಕ್ರಾಮಿಕ ರೋಗದ ಪರಿಸ್ಥಿತಿಯಾಗಿರಲಿ, ಎನ್‌ಸಿಸಿ ಕೆಡೆಟ್‌ಗಳು ದೇಶದ ಜನತೆಗೆ ನೆರವಾಗಿದ್ದಾರೆ. ಕೊರೋನ ಸೋಂಕಿನ ಸಂದರ್ಭ ಲಕ್ಷಾಂತರ ಎನ್‌ಸಿಸಿ ಕೆಡೆಟ್‌ಗಳು ಆಡಳಿತ ಮತ್ತು ಸಮಾಜದ ಜೊತೆಗೆ ಕಾರ್ಯನಿರ್ವಹಿಸಿದ್ದಾರೆ ಎಂದು ಪ್ರಧಾನಿ ಶ್ಲಾಘಿಸಿದರು. ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್, ರಕ್ಷಣಾ ಪಡೆಯ ಮುಖ್ಯಸ್ಥ ಜ ಬಿಪಿನ್ ರಾವತ್, ಮೂರೂ ಸೇನಾ ವಿಭಾಗಗಳ ಮುಖ್ಯಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪ್ರಧಾನಿ ಮೋದಿ ಎನ್‌ಸಿಸಿ ಕ್ಯಾಪ್ ಧರಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಎನ್‌ಸಿಸಿ ಕೆಡೆಟ್‌ಗಳ ಪಥಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಿದರು.