×
Ad

ಮುಂದಿನ ವರ್ಷ ವಿಧಾನ ಸಭೆ ಚುನಾವಣೆಯಲ್ಲಿ 6 ರಾಜ್ಯಗಳಲ್ಲಿ ಆಪ್ ಸ್ಪರ್ಧೆ

Update: 2021-01-28 23:05 IST

ಹೊಸದಿಲ್ಲಿ, ಜ. 27: ಮುಂದಿನ ವರ್ಷ ಉತ್ತರಪ್ರದೇಶ, ಉತ್ತರಾಖಂಡ, ಗೋವಾ, ಗುಜರಾತ್, ಹಿಮಾಚಲ ಪ್ರದೇಶ ಹಾಗೂ ಪಂಜಾಬ್‌ನಲ್ಲಿ ನಡೆಯಲಿರುವ ವಿಧಾನ ಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಸ್ಪರ್ಧಿಸಲಿದೆ. ಆಪ್ ವರಿಷ್ಠ ಅರವಿಂದ ಕೇಜ್ರಿವಾಲ್ ಗುರುವಾರ ನಡೆದ ಪಕ್ಷದ 9ನೇ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ಈ ಬಗ್ಗೆ ಪ್ರಕಟಣೆ ನೀಡಿದ್ದಾರೆ.

‘‘ಆಪ್ ಉತ್ತರಪ್ರದೇಶ, ಉತ್ತರಾಖಂಡ, ಗೋವಾ, ಗುಜರಾತ್, ಹಿಮಾಚಲಪ್ರದೇಶ ಹಾಗೂ ಪಂಜಾಬ್ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದೆ’’ ಎಂದು ಹೇಳಿರುವ ಅರವಿಂದ ಕೇಜ್ರಿವಾಲ್, ಗಣರಾಜ್ಯೋತ್ಸವದ ದಿನ ದಿಲ್ಲಿಯಲ್ಲಿ ನಡೆದ ಟ್ರಾಕ್ಟರ್ ರ್ಯಾಲಿಯಲ್ಲಿ ಸಂಭವಿಸಿದ ಹಿಂಸಾಚಾರಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ದಿಲ್ಲಿಯಲ್ಲಿ ಹಿಂಸಾಚಾರ ಸಂಭವಿಸಿದ ಬಳಿಕ ರೈತ ನಾಯಕರ ವಿರುದ್ಧ ಕನಿಷ್ಠ 24 ಪ್ರಕರಣಗಳನ್ನು ದಾಖಲಿಸಲಾಗಿದೆ ಹಾಗೂ ಶೋಕಾಸ್ ನೋಟಿಸು ಜಾರಿ ಮಾಡಲಾಗಿದೆ ಎಂದು ಹೇಳಿದ ಕೇಜ್ರಿವಾಲ್, ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ವ್ಯಕ್ತಪಡಿಸುವ ಉದ್ದೇಶದಿಂದ ನಾಳೆ ಪ್ರಧಾನಿ ಅವರ ಭಾಷಣವನ್ನು ತನ್ನ ಪಕ್ಷ ಬಹಿಷ್ಕರಿಸಲಿದೆ ಎಂದರು.

‘‘ಜನವರಿ 26ರಂದು ಸಂಭವಿಸಿದ ಹಿಂಸಾಚಾರದ ಬಗ್ಗೆ ವಿಷಾದವಿದೆ. ಈ ಹಿಂಸಾಚಾರದಲ್ಲಿ ಭಾಗಿಯಾದ ನಾಯಕ ಅಥವಾ ಪಕ್ಷ ಕಠಿಣ ಕ್ರಮ ಎದುರಿಸಬೇಕು’’ ಎಂದು ಅವರು ಹೇಳಿದರು. ಗಣರಾಜ್ಯೋತ್ಸವದ ದಿನ ನಡೆದ ಟ್ರಾಕ್ಟರ್ ರ್ಯಾಲಿಯ ಸಂದರ್ಭ ಸಂಭವಿಸಿದ ಘಟನೆಗಳಿಂದಾಗಿ ಕೇಂದ್ರದ ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳ ವಿರುದ್ಧದ ಚಳವಳಿಯ ಅಂತ್ಯವಾಗಲಾರದು ಎಂದು ಅವರು ತಿಳಿಸಿದರು. ನಾವು ಸಂಘಟಿತರಾಗಿ ರೈತರನ್ನು ಬೆಂಬಲಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News