×
Ad

ನಾವು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ, ಆದರೆ ಹೋರಾಟದಿಂದ ಹಿಂದೆ ಸರಿಯುವುದಿಲ್ಲ: ರೈತ ಮುಖಂಡ ರಾಕೇಶ್ ಟಿಕಾಯತ್

Update: 2021-01-29 01:06 IST

ಹೊಸದಿಲ್ಲಿ, ಜ.29: ದಿಲ್ಲಿಯ ಗಡಿಭಾಗ ಗಾಝಿಪುರ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ತೆರವುಗೊಳಿಸಬೇಕೆಂದು ಉತ್ತರಪ್ರದೇಶ ಪೊಲೀಸರು ಆದೇಶ ನೀಡಿದ್ದು ಮಾತ್ರವಲ್ಲದೇ ಈಗಾಗಲೇ ರೈತರು ಪ್ರತಿಭಟನೆ ನಡೆಸುತ್ತಿರುವ ಸ್ಥಳದಲ್ಲಿ ನೆರೆದಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ರೈತ ನಾಯಕ ರಾಕೇಶ್ ಟಿಕಾಯತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

" ಬಿಜೆಪಿಗರು ರೈತರನ್ನು ಕೊಲೆ ಮಾಡಲು ಸಂಚು ಹೂಡಿದ್ದು ಈಗಾಗಲೇ ಹಲವಾರು ಶಾಸಕರು ಹಾಗೂ ಅವರ ಬೆಂಬಲಿಗರು ಬಂದು ನೆರೆದಿದ್ದಾರೆ ಹಾಗೆಯೇ ಪೊಲೀಸರು ಕೂಡ ನಾವು ಪ್ರತಿಭಟನೆ ನಡೆಸುತ್ತಿರುವ ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ. ನಮ್ಮ ಮೇಲೆ ಆಕ್ರಮಣ ಗೈಯಲು ಈ ದೇಶ ಬಿಡುವುದಿಲ್ಲ, ನಾವು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಸಿದ್ಧರಿದ್ದೇವೆ. ಆದರೆ ಈ ಪ್ರತಿಭಟನೆಯನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ ಎಂದು ರೈತ ನಾಯಕ ರಾಕೇಶ್ ಟಿಕಾಯತ್  ಕಣ್ಣೀರಿಟ್ಟು ಹೇಳುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಾದ್ಯಂತ ಹರಿದಾಡುತ್ತಿದೆ.

ಈ ಹಿನ್ನೆಲೆಯಲ್ಲಿ ಇದೀಗ ರಾಕೇಶ್ ಟಿಕಾಯತ್ ಊರಿನ ಭಾರೀ ಸಂಖ್ಯೆಯಲ್ಲಿ ರೈತರು ದಿಲ್ಲಿಗೆ ಬರಲು ತಯಾರಾಗುತ್ತಿದ್ದಾರೆ ಎಂದು ತಿಳಿದುಬಂದಿದೆ. ಹಾಗೆಯೇ ಹರಿಯಾಣ ಮುಂತಾದ ಹಲವಾರು ರಾಜ್ಯಗಳಿಂದ ರೈತರು ಮತ್ತಷ್ಟು ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿದ್ದಾರೆ ಎಂದು ಸುದ್ದಿಮೂಲಗಳು ತಿಳಿಸಿವೆ.

ಈ ಕುರಿತಾದಂತೆ ಗುಜರಾತ್ ನ ಶಾಸಕ ಜಿಗ್ನೇಶ್ ಮೆವಾನಿ ಸೇರಿದಂತೆ ಹಲವಾರು ರಾಜಕಾರಣಿಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಟ್ವೀಟ್ ಮಾಡಿದ್ದು, "ರೈತರನ್ನು ಪ್ರತಿಭಟನಾ ಸ್ಥಳದಿಂದ ತೆರವುಗೊಳಿಸುವ ನಿಟ್ಟಿನಲ್ಲಿ ಭಾರೀ ಸಂಖ್ಯೆಯಲ್ಲಿರುವ ಪೊಲೀಸರು ಗಾಝಿಪುರದಲ್ಲಿ ಪ್ರತಿಭಟನಾನಿರತರಾಗಿರುವ ರೈತರ ಮೇಲೆ ಇಂದು ರಾತ್ರಿ ಕಾರ್ಯಾಚರಣೆ ನಡೆಸುವ ಸಾಧ್ಯತೆಗಳಿವೆ" ಎಂದು ಟ್ವೀಟ್ ಮಾಡಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News