ಚೀನಿ ಅತಿಕ್ರಮಣ ತಡೆಗೆ ಕೇಂದ್ರ ವಿಫಲ ಆರೋಪ : ಅರುಣಾಚಲದಲ್ಲಿ ಪ್ರತಿಭಟನೆ

Update: 2021-01-29 05:01 GMT

ಗುವಾಹತಿ : ಅರುಣಾಚಲ ಪ್ರದೇಶದ ಅಪ್ಪರ್ ಸುಬಾನ್‌ಸಿರಿ ಜಿಲ್ಲೆಯಲ್ಲಿ ಚೀನಾ ಗ್ರಾಮವನ್ನು ಸ್ಥಾಪಿಸಿರುವ ಕ್ರಮವನ್ನು ಖಂಡಿಸಿ ಹಾಗೂ ವಿದೇಶಿ ಅತಿಕ್ರಮಣ ತಡೆಗೆ ಕೇಂದ್ರ ವಿಫಲವಾಗಿದೆ ಎಂದು ಆಪಾದಿಸಿ ಆಲ್ ಅರುಣಾಚಲ ಪ್ರದೇಶ ಸ್ಟೂಡೆಂಟ್ಸ್ ಯೂನಿಯನ್ (ಎಎಪಿಎಸ್‌ಯು) ನೇತೃತ್ವದಲ್ಲಿ ಗುರುವಾರ ಬೃಹತ್ ರಾಜ್ಯವ್ಯಾಪಿ ಪ್ರತಿಭಟನೆ ಆರಂಭಿಸಲಾಯಿತು.

ರಾಜಧಾನಿ ಇಟಾನಗರದ ಇಂದಿರಾಗಾಂಧಿ ಉದ್ಯಾನವನದಲ್ಲಿ ವಿದ್ಯಾರ್ಥಿ ಸಂಘಟನೆಯ 16 ಘಟಕಗಳು ಮತ್ತು ಸಮುದಾಯ ಸಂಘಟನೆಗಳ ಕಾರ್ಯಕರ್ತರು ಒಂದು ದಿನದ ಧರಣಿ ನಡೆಸಿದರು. ಅಪ್ಪರ್ ಸುಬಾನ್‌ಸಿರಿ ಜಿಲ್ಲೆಯ ಜಿಲ್ಲಾ ಕೇಂದ್ರವಾದ ದಪೋರಿಜೊದಲ್ಲಿ ಕೂಡಾ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ಆಯೋಜಿಸಿದ್ದರು.

ಅತಿಕ್ರಮಣ ವಿಚಾರದಲ್ಲಿ ಕೇಂದ್ರ ಕಠಿಣ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಪ್ರತಿಭಟನಾಕಾರರು, ಅರುಣಾಚಲ ಪ್ರದೇಶದಲ್ಲಿ ಭಾರತ- ಚೀನಾ ಗಡಿಯಾದ ಮೆಕ್‌ಮಹೋನ್ ಗಡಿಯಲ್ಲಿ ಚೀನಾದ ಚಟುವಟಿಕೆಗಳ ಬಗ್ಗೆ ಕೇಂದ್ರ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.

ರಾಜ್ಯವನ್ನು ವಿದೇಶಿ ಆಕ್ರಮಣದಿಂದ ತಡೆಯುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಎಎಪಿಎಸ್‌ಯು ಅಧ್ಯಕ್ಷ ಹವಾ ಬಗಾಂಗ್ ಆಪಾದಿಸಿದರು. ಸರ್ಕಾರ ಅನುಮತಿ ನೀಡಿದರೆ ಚೀನಾ ಸೇನೆ ವಿರುದ್ಧ ಎಎಪಿಎಸ್‌ಯು ಕಾರ್ಯಕರ್ತರು ಹೋರಾಡಲು ಸಿದ್ಧರಿದ್ದೇವೆ ಎಂದು ಪ್ರತಿಭಟನಾಕಾರರು ಘೋಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News