ರೈತರ ಪ್ರತಿಭಟನೆ ಕುರಿತ ಪೋಸ್ಟ್: ಶಶಿ ತರೂರ್, ಆರು ಪತ್ರಕರ್ತರ ವಿರುದ್ಧ 'ದೇಶದ್ರೋಹ' ಪ್ರಕರಣ ದಾಖಲು
ಹೊಸದಿಲ್ಲಿ,ಜ.29: ಗಣರಾಜ್ಯೋತ್ಸವದಂದು ದಿಲ್ಲಿಯಲ್ಲಿ ರೈತರು ಟ್ರ್ಯಾಕ್ಟರ್ ರ್ಯಾಲಿ ನಡೆಸಿದ್ದ ವೇಳೆ ಸಾಮಾಜಿಕ ತಾಣದಲ್ಲಿ 'ಪ್ರಚೋದನಕಾರಿ' ಪೋಸ್ಟ್ ಗಳನ್ನು ಪ್ರಕಟಿಸಿದ್ದಾರೆಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಮತ್ತು ಆರು ಪತ್ರಕರ್ತರ ವಿರುದ್ಧ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ndtv.com ವರದಿ ಮಾಡಿದೆ. ಇವರ ವಿರುದ್ಧ ದೇಶದ್ರೋಹ, ಕ್ರಿಮಿನಲ್ ಪಿತೂರಿ ಮತ್ತು ಭಾರತೀಯ ದಂಡ ಸಂಹಿತೆಯಡಿ ದ್ವೇಷವನ್ನು ಉತ್ತೇಜಿಸುವುದು ಸೇರಿದಂತೆ ಆರೋಪಗಳನ್ನು ಮಾಡಲಾಗಿದೆ.
ನೋಯ್ಡಾದಲ್ಲಿ ಒಂದು ಎಫ್‌ಐಆರ್ ಮತ್ತು ಮಧ್ಯಪ್ರದೇಶದ ಭೋಪಾಲ್, ಹೊಸಂಗಾಬಾದ್, ಮುಲ್ತಾಯಿ ಮತ್ತು ಬೆತುಲ್‌ನಲ್ಲಿ ನಾಲ್ಕು ಎಫ್‌ಐಆರ್ ದಾಖಲಿಸಲಾಗಿದೆ.
ದೆಹಲಿ ಸಮೀಪದ ನಗರದ ನಿವಾಸಿಯೊಬ್ಬರು ದೂರಿನ ಮೇರೆಗೆ ನೋಯ್ಡಾದಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು, ಕಾಂಗ್ರೆಸ್ ಹಿರಿಯನಾಯಕ ಶಶಿ ತರೂರ್ ಮತ್ತು ಪತ್ರಕರ್ತರು "ಡಿಜಿಟಲ್ ಪ್ರಸಾರ" ಮತ್ತು "ಸೋಷಿಯಲ್ ಮೀಡಿಯಾ ಪೋಸ್ಟ್‌ಗಳನ್ನು" ಗಳನ್ನು ದುರ್ಬಳಕೆ ಮಾಡಿರುವುದರ ಕುರಿತು ಆರೋಪಿಸಿದ್ದಾರೆ. ರೈತನೋರ್ವ ಟ್ರಾಕ್ಟರ್ ಮಗುಚಿ ಮೃತಪಟ್ಟಿದ್ದು, ಆದರೆ ಇವರೆಲ್ಲರೂ ರೈತನು ಪೊಲೀಸರ ಗುಂಡಿಗೆ ಬಲಿಯಾಗಿದ್ದ ಎಂಬ ಪೋಸ್ಟ್ ಗಳನ್ನು ಹರಡಿದ್ದಾರೆಂದು ಆರೋಪಿಸಲಾಗಿದೆ.
ಎಫ್‌ಐಆರ್ ನಲ್ಲಿ ಕಾಂಗ್ರೆಸ್ ಸಂಸದ ಶಶಿ ತರೂರ್, ಹಿರಿಯ ಪತ್ರಕರ್ತ ರಾಜ್ ದೀಪ್ ಸರ್ದೇಸಾಯಿ, ಕ್ಯಾರವಾನ್ ನ ವಿನೋದ್ ಕೆ ಜೋಸ್, ಮೃನಾಲ್ ಪಾಂಡೆ, ಜಾಫರ್ ಆಘಾ, ಪರೇಶ್ ನಾಥ್ ಹಾಗೂ ಅನಂತ್ ನಾಥ್ ರನ್ನು ಹೆಸರಿಸಲಾಗಿದೆ..
"ಹೌದು, ಎಫ್ಐಆರ್ ದಾಖಲಿಸಲಾಗಿದೆ" ಎಂದು ನೋಯ್ಡಾದ ಹಿರಿಯ ಪೊಲೀಸ್ ಅಧಿಕಾರಿ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.