×
Ad

ರೈತನ ಸಾವಿನ ಕುರಿತು ವರದಿಗಾಗಿ ‘ದಿ ವೈರ್’ ಸಂಪಾದಕರ ವಿರುದ್ಧ ಉತ್ತರ ಪ್ರದೇಶದಲ್ಲಿ ಎಫ್‌ಐಆರ್ ದಾಖಲು

Update: 2021-01-31 14:52 IST
ಸಿದ್ಧಾರ್ಥ ವರದರಾಜನ್

ಹೊಸದಿಲ್ಲಿ,ಜ.31: ಗಣತಂತ್ರ ದಿನದಂದು ದಿಲ್ಲಿಯಲ್ಲಿ ನಡೆದಿದ್ದ ಟ್ರಾಕ್ಟರ್ ರ್ಯಾಲಿ ಸಂದರ್ಭದಲ್ಲಿ ಮೃತಪಟ್ಟಿದ್ದ ರೈತನ ಸಾವಿಗೆ ಪೊಲೀಸ್ ಗೋಲಿಬಾರ್ ಕಾರಣವಾಗಿತ್ತು ಎಂದು ಸುದ್ದಿ ಜಾಲತಾಣ ‘ದಿ ವೈರ್’ನಲ್ಲಿ ಪ್ರಕಟವಾಗಿದ್ದ ವರದಿಯನ್ನು ಟ್ವೀಟಿಸಿದ್ದಕ್ಕಾಗಿ ಸ್ಥಾಪಕ ಸಂಪಾದಕ ಸಿದ್ಧಾರ್ಥ ವರದರಾಜನ್ ಅವರ ವಿರುದ್ಧ ಉತ್ತರ ಪ್ರದೇಶದ ರಾಮಪುರ ಜಿಲ್ಲೆಯ ಪೊಲೀಸರು ಶನಿವಾರ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ಮೃತ ನವ್ರೀತ್ ಸಿಂಗ್‌ನ ಕುಟುಂಬ ಸದಸ್ಯರ ಹೇಳಿಕೆಯನ್ನು ಉಲ್ಲೇಖಿಸಿ ‘ದಿ ವೈರ್’ ಶುಕ್ರವಾರ ಈ ವರದಿಯನ್ನು ಪ್ರಕಟಿಸಿತ್ತು. ನವ್ರೀತ್ ಚಲಾಯಿಸುತ್ತಿದ್ದ ಟ್ರಾಕ್ಟರ್ ಪಲ್ಟಿಯಾಗಿ ಆತನ ಸಾವು ಸಂಭವಿಸಿದೆ ಎಂಬ ದಿಲ್ಲಿ ಪೊಲೀಸರ ಹೇಳಿಕೆಯನ್ನು ತಿರಸ್ಕರಿಸಿರುವ ಕುಟುಂಬ ಸದಸ್ಯರು, ಆತ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ ಎಂದು ಆರೋಪಿಸಿದ್ದಾರೆ.

ವರದರಾಜನ್ ಟ್ವೀಟ್‌ಗೆ ಶನಿವಾರ ಸಂಜೆ ಪ್ರತಿಕ್ರಿಯಿಸಿದ್ದ ರಾಮಪುರ ಜಿಲ್ಲಾಧಿಕಾರಿಗಳು,‘ವಾಸ್ತವಾಂಶಗಳಿಗೆ ಅಂಟಿಕೊಂಡಿರುವಂತೆ ನಾವು ನಿಮ್ಮನ್ನು ಕೋರಿಕೊಳ್ಳುತ್ತಿದ್ದೇವೆ ’ಎಂದು ಬರೆದಿದ್ದರು.

ತನ್ನ ವಿರುದ್ಧ ಎಫ್‌ಐಆರ್ ದಾಖಲಾಗಿರುವುದಕ್ಕೆ ರವಿವಾರ ಬೆಳಿಗ್ಗೆ ಪ್ರತಿಕ್ರಿಯಿಸಿರುವ ವರದರಾಜನ್, ದುರುದ್ದೇಶಪೂರಿತ ಕಾನೂನು ಕ್ರಮಕ್ಕೆ ಐಪಿಸಿಯಲ್ಲಿ ಅವಕಾಶವಿದೆಯೇ ಎಂದು ಪ್ರಶ್ನಿಸಿದ್ದಾರೆ. ‘ಟ್ರಾಕ್ಟರ್ ರ್ಯಾಲಿಯಲ್ಲಿ ಕೊಲ್ಲಲ್ಪಟ್ಟ ರೈತನ ಅಜ್ಜ ಲಿಖಿತವಾಗಿ ಹೇಳಿದ್ದನ್ನು ಟ್ವೀಟಿಸಿದ್ದಕ್ಕಾಗಿ ನನ್ನ ವಿರುದ್ಧ ಎಫ್‌ಐಆರ್ ದಾಖಲಿಸಿರುವ ಉ.ಪ್ರದೇಶ ಪೊಲೀಸರು ದುರುದ್ದೇಶಪೂರಿತ ಕಾನೂನು ಕ್ರಮವನ್ನು ಕೈಗೊಂಡಿದ್ದಾರೆ’ ಎಂದಿದ್ದಾರೆ.

ಮೃತ ವ್ಯಕ್ತಿಯ ಬಂಧುಗಳು ಮರಣೋತ್ತರ ಪರೀಕ್ಷೆಯನ್ನು ಅಥವಾ ಸಾವಿಗೆ ಪೊಲೀಸರು ನೀಡುವ ಕಾರಣಗಳನ್ನು ಪ್ರಶ್ನಿಸಿದರೆ ಅವರ ಹೇಳಿಕೆಗಳನ್ನು ಮಾಧ್ಯಮಗಳು ವರದಿ ಮಾಡುವುದು ಉತ್ತರ ಪ್ರದೇಶದಲ್ಲಿ ಅಪರಾಧವಾಗಿದೆ ಎಂದು ಪ್ರತ್ಯೇಕ ಟ್ವೀಟ್‌ನಲ್ಲಿ ವರದರಾಜನ್ ಹೇಳಿದ್ದಾರೆ.

‘ಮರಣೋತ್ತರ ಪರೀಕ್ಷೆಯನ್ನು ನಡೆಸಿದ್ದ ವೈದ್ಯರ ಪೈಕಿ ಓರ್ವರು ನವ್ರೀತ್ ದೇಹದಲ್ಲಿ ಗುಂಡಿನ ಗಾಯವನ್ನು ತಾನು ಸ್ಪಷ್ಟವಾಗಿ ನೋಡಿದ್ದಾಗಿ ನಮಗೆ ಹೇಳಿದ್ದರು ಮತ್ತು ನಾವು ಶಾಂತಿಯುತವಾಗಿ ಮೃತದೇಹದ ಅಂತ್ಯಸಂಸ್ಕಾರವನ್ನು ನಡೆಸಿದೆವು ಎಂದು ನವ್ರೀತ್ ಸಿಂಗ್‌ನ ಅಜ್ಜ ಹರ್ದೀಪ್ ಸಿಂಗ್ ದಿಬ್ಡಿಬಾ ಅವರು ಹೇಳಿದ್ದನ್ನು ‘ದಿ ವೈರ್ ’ನ ವರದಿಯು ಉಲ್ಲೇಖಿಸಿತ್ತು. ‘ಆದರೆ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಗುಂಡೇಟನ್ನು ಉಲ್ಲೇಖಿಸಿಲ್ಲ, ನಮ್ಮನ್ನು ವಂಚಿಸಲಾಗಿದೆ. ತಾನು ಗುಂಡೇಟಿನ ಗಾಯವನ್ನು ನೋಡಿದ್ದರೂ ತಾನೇನೂ ಮಾಡುವಂತಿರಲಿಲ್ಲ, ತನ್ನ ಕೈಗಳನ್ನು ಕಟ್ಟಿ ಹಾಕಲಾಗಿತ್ತು ಎಂದು ವೈದ್ಯರು ತಿಳಿಸಿದ್ದರು ’ಎಂದೂ ಹರ್ದೀಪ್ ಸಿಂಗ್ ಹೇಳಿದ್ದರು.

ಆದರೆ ಅವರ ಹೇಳಿಕೆಯನ್ನು ತಿರಸ್ಕರಿಸಿರುವ ವೈದ್ಯರ ತಂಡವು, ತಲೆಗೆ ಆಗಿದ್ದ ಗಾಯದಿಂದ ಆಘಾತ ಮತ್ತು ಮಿದುಳಿನ ರಕ್ತಸ್ರಾವದಿಂದ ನವ್ರೀತ್ ಸಾವು ಸಂಭವಿಸಿದೆ ಎಂದು ಪ್ರತಿಪಾದಿಸಿದ್ದಾರೆ.

ನವ್ರೀತ್ ಸಾವಿನ ಕುರಿತು ದೃಢಪಡದ ಸುದ್ದಿಗಳನ್ನು ಶೇರ್ ಮಾಡಿಕೊಂಡ ಆರೋಪದಲ್ಲಿ ಕಾಂಗ್ರೆಸ್ ಸಂಸದ ಶಶಿ ತರೂರ್ ಮತ್ತು ಇತರ ಆರು ಪತ್ರಕರ್ತರ ವಿರುದ್ಧ ಈಗಾಗಲೇ ವಿವಿಧೆಡೆಗಳಲ್ಲಿ ನಾಲ್ಕು ಎಫ್‌ಐಆರ್‌ಗಳು ದಾಖಲಾಗಿದ್ದು, ಐದನೇ ಎಫ್‌ಐಆರ್‌ನ್ನು ದಿಲ್ಲಿ ಪೊಲೀಸರು ಶನಿವಾರ ದಾಖಲಿಸಿಕೊಂಡಿದ್ದಾರೆ. ಪತ್ರಕರ್ತ ರಾಜದೀಪ್ ಸರ್ದೇಸಾಯಿ, ನ್ಯಾಷನಲ್ ಹೆರಾಲ್ಡ್‌ನ ಮೃಣಾಲ ಪಾಂಡೆ, ಕ್ವಾಮಿ ಆವಾಝ್‌ನ ಸಂಪಾದಕ ಝಫರ್ ಆಗಾ, ಕಾರವಾನ್ ಮ್ಯಾಗಝಿನ್‌ನ ಸ್ಥಾಪಕ ಸಂಪಾದಕ ಪರೇಶ್ ನಾಥ್ ಹಾಗೂ ಸಂಪಾದಕರಾದ ಅನಂತ ನಾಥ್ ಮತ್ತು ವಿನೋದ ಕೆ.ಜೋಸ್ ಅವರನ್ನು ಎಫ್‌ಐಆರ್‌ನಲ್ಲಿ ಹೆಸರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News