ರೈತರ ಪ್ರತಿಭಟನೆಯ ಕುರಿತು ವಿದೇಶಿ ಸೆಲೆಬ್ರಿಟಿಗಳ ಹೇಳಿಕೆಗಳು 'ದುರದೃಷ್ಟಕರ' ಎಂದ ವಿದೇಶಾಂಗ ಸಚಿವಾಲಯ
ಹೊಸದಿಲ್ಲಿ,ಫೆ.3: ಅಂತರರಾಷ್ಟ್ರೀಯ ಪಾಪ್ ತಾರೆ ರಿಹಾನ್ನಾ,ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್‌ಬರ್ಗ್ ಸೇರಿದಂತೆ ಹಲವಾರು ವಿದೇಶಿ ಸೆಲೆಬ್ರಿಟಿಗಳು ತಮ್ಮ ಟ್ವೀಟ್‌ಗಳ ಮೂಲಕ ರೈತರ ಪ್ರತಿಭಟನೆಯನ್ನು ಜಾಗತಿಕ ಮಟ್ಟಕ್ಕೆ ಒಯ್ದಿರುವ ನಡುವೆಯೇ ಬುಧವಾರ ಈ ಹಿಂದೆಂದೂ ಕಂಡಿರದ ತೀಕ್ಷ್ಣ ಪ್ರತಿಕ್ರಿಯೆಯನ್ನು ನೀಡಿರುವ ಕೇಂದ್ರ ಸರಕಾರವು,ಸಂವೇದನಾಶೀಲ ಸಾಮಾಜಿಕ ಮಾಧ್ಯಮ ಹ್ಯಾಷ್‌ಟ್ಯಾಗ್‌ಗಳು ಮತ್ತು ಹೇಳಿಕೆಗಳ ಪ್ರಚೋದನೆಯ ವಿರುದ್ಧ ಎಚ್ಚರಿಕೆಯನ್ನು ನೀಡಿದೆ ಮತ್ತು ಭಾರತದ ಕೆಲವು ಭಾಗಗಳಲ್ಲಿ ರೈತರ ಸಣ್ಣ ವರ್ಗವೊಂದು ಪ್ರತಿಭಟನೆ ನಡೆಸುತ್ತಿದೆ ಎಂದು ಹೇಳಿದೆ.
ಈ ಪ್ರತಿಭಟನೆಗಳನ್ನು ಭಾರತದ ಪ್ರಜಾಪ್ರಭುತ್ವ ನೀತಿಗಳು ಮತ್ತು ರಾಜಕೀಯದ ಹಾಗೂ ಬಿಕ್ಕಟ್ಟನ್ನು ಬಗೆಹರಿಸಲು ಸರಕಾರ ಮತ್ತು ಸಂಬಂಧಿತ ರೈತರ ಗುಂಪುಗಳು ನಡೆಸುತ್ತಿರುವ ಪ್ರಯತ್ನಗಳ ಹಿನ್ನೆಲೆಯಲ್ಲಿ ನೋಡಬೇಕು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ. ಹೇಳಿಕೆಯು (#IndiaTogether) ಮತ್ತು #IndiaAgainstPropaganda ಹ್ಯಾಷ್‌ಟ್ಯಾಗ್‌ಗಳನ್ನು ಒಳಗೊಂಡಿದೆ.
‘ಇಂತಹ ವಿಷಯಗಳಲ್ಲಿ ಹೇಳಿಕೆಗಳನ್ನು ನೀಡುವ ಮುನ್ನ ಸತ್ಯಾಂಶಗಳನ್ನು ತಿಳಿದುಕೊಳ್ಳುವಂತೆ ಮತ್ತು ಸಮಸ್ಯೆಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವಂತೆ ನಾವು ಆಗ್ರಹಿಸುತ್ತೇವೆ. ವಿಶೇಷವಾಗಿ ಸೆಲೆಬ್ರಿಟಿಗಳಿಂದ ಸಂವೇದನಾಶೀಲ ಸಾಮಾಜಿಕ ಮಾಧ್ಯಮ ಹ್ಯಾಷ್‌ಟ್ಯಾಗ್‌ಗಳು ಮತ್ತು ಹೇಳಿಕೆಗಳ ಪ್ರಚೋದನೆಯು ನಿಖರವಲ್ಲ ಮತ್ತು ಜವಾಬ್ದಾರಿಯುತವೂ ಅಲ್ಲ ’ಎಂದಿರುವ ಸರಕಾರವು,ಭಾರತದ ಸಂಸತ್ತು ವಿವರವಾದ ಚರ್ಚೆಗಳ ನಂತರವೇ ಕೃಷಿ ಕ್ಷೇತ್ರದಲ್ಲಿ ಸುಧಾರಣೆಗೆ ಸಂಬಂಧಿಸಿದಂತೆ ಶಾಸನಗಳನ್ನು ಅಂಗೀಕರಿಸಿದೆ. ಈ ಶಾಸನಗಳು ರೈತರಿಗೆ ವಿಸ್ತೃತ ಮಾರುಕಟ್ಟೆಗೆ ಪ್ರವೇಶಾವಕಾಶವನ್ನು ಕಲ್ಪಿಸುತ್ತವೆ ಮತ್ತು ಆರ್ಥಿಕವಾಗಿ ಮತ್ತು ಪಾರಿಸರಿಕವಾಗಿ ಸುಸ್ಥಿರ ಕೃಷಿಗೆ ಮಾರ್ಗಗಳನ್ನು ಸುಗಮಗೊಳಿಸಿವೆ ಎಂದು ಹೇಳಿದೆ.
ಭಾರತದ ಕೆಲವೆಡೆಗಳಲ್ಲಿನ ರೈತರ ಅತ್ಯಂತ ಸಣ್ಣ ವರ್ಗವು ಈ ಕಾಯ್ದೆಗಳ ಬಗ್ಗೆ ಕೆಲವು ಆಕ್ಷೇಪಗಳನ್ನು ಹೊಂದಿದೆ. ಪ್ರತಿಭಟನಾಕಾರರ ಭಾವನೆಗಳನ್ನು ಗೌರವಿಸಿ ಸರಕಾರವು ಮಾತುಕತೆಗಳನ್ನು ಆರಂಭಿಸಿದೆ. ಕೃಷಿ ಕಾನೂನುಗಳನ್ನು ಅಮಾನತಿನಲ್ಲಿರಿಸುವ ಕೊಡುಗೆಯನ್ನು ಸರಕಾರವು ರೈತರ ಮುಂದಿರಿಸಿದೆ. ಸ್ವತಃ ಭಾರತದ ಪ್ರಧಾನಿಗಳೇ ಈ ಭರವಸೆಯನ್ನು ನೀಡಿದ್ದಾರೆ ಎಂದಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೇಳಿಕೆಯು, ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಅಜೆಂಡಾವನ್ನು ಈ ಪ್ರತಿಭಟನೆಗಳ ಮೇಲೆ ಹೇರಿ ಅವುಗಳ ದಾರಿ ತಪ್ಪಿಸಲು ಯತ್ನಿಸುತ್ತಿರುವುದು ದುರದೃಷ್ಟಕರವಾಗಿದೆ ಎಂದಿದೆ. ಗಣತಂತ್ರ ದಿನವಾದ ಜ.26ರಂದು ದಿಲ್ಲಿಯಲ್ಲಿ ಸಂಭವಿಸಿದ ಘಟನೆಗಳು ಇದಕ್ಕೆ ಸಾಕ್ಷಿಯಾಗಿವೆ. ಭಾರತೀಯ ಸಂವಿಧಾನದ ವರ್ಷಾಚರಣೆಯ ಈ ರಾಷ್ಟ್ರಿಯ ಸಂಸ್ಮರಣಾ ದಿನಕ್ಕೆ ಕಳಂಕವನ್ನು ಹಚ್ಚಲಾಗಿದೆ ಮತ್ತು ರಾಷ್ಟ್ರ ರಾಜಧಾನಿಯಲ್ಲಿ ಹಿಂಸಾಚಾರ ಮತ್ತು ದಾಂಧಲೆಗಳು ವಿಜೃಂಭಿಸಿದ್ದವು. ಈ ಪೈಕಿ ಕೆಲವು ಪಟ್ಟಭದ್ರ ಹಿತಾಸಕ್ತ ಗುಂಪುಗಳು ಭಾರತದ ವಿರುದ್ಧ ಅಂತರರಾಷ್ಟ್ರೀಯ ಬೆಂಬಲವನ್ನು ಕ್ರೋಡೀಕರಿಸಲೂ ಪ್ರಯತ್ನಿಸಿವೆ. ಇಂತಹ ಗೌಣ ಶಕ್ತಿಗಳ ಪ್ರಚೋದನೆಯಿಂದಾಗಿ ವಿಶ್ವದ ಕೆಲವೆಡೆಗಳಲ್ಲಿ ಮಹಾತ್ಮಾ ಗಾಂಧಿಯವರ ಪ್ರತಿಮೆಗಳನ್ನು ವಿರೂಪಗೊಳಿಸಲಾಗಿದೆ. ಇದು ಭಾರತದ ಮತ್ತು ಇತರ ಎಲ್ಲ ನಾಗರಿಕ ಸಮಾಜಗಳ ಪಾಲಿಗೆ ಅತ್ಯಂತ ಆತಂಕದ ವಿಷಯವಾಗಿದೆ ಎಂದು ಹೇಳಿದೆ.
ಪೊಲೀಸರು ಅತ್ಯಂತ ಸಂಯಮದಿಂದ ಪ್ರತಿಭಟನೆಗಳನ್ನು ನಿಭಾಯಿಸಿದ್ದಾರೆ. ನೂರಾರು ಪುರುಷ ಮತ್ತ ಮಹಿಳಾ ಪೊಲೀಸ್ ಸಿಬ್ಬಂದಿಗಳ ಮೇಲೆ ದಾಳಿಗಳು ನಡೆದಿರುವುದನ್ನು ಗಮನಿಸಬಹುದಾಗಿದೆ. ಕೆಲವು ಪ್ರಕರಣಗಳಲ್ಲಿ ಚೂರಿಯಿಂದ ಇರಿದು ಗಂಭೀರವಾಗಿ ಗಾಯಗೊಳಿಸಲಾಗಿದೆ ಎಂದೂ ಹೇಳಿಕೆಯು ಬೆಟ್ಟು ಮಾಡಿದೆ.